‘ಹೆದ್ದಾರಿ ಗಂಡಾಂತರ..!’ : ಎಚ್ಚೆತ್ತುಕೊಳ್ಳುವುದೆ ಎನ್.ಹೆಚ್., ಪೊಲೀಸ್, ಸ್ಮಾರ್ಟ್ ಸಿಟಿ ಆಡಳಿತ?

ಶಿವಮೊಗ್ಗ, ಜ. 30: ಶಿವಮೊಗ್ಗ ನಗರದ ಹೊರವಲಯ ಗಾಡಿಕೊಪ್ಪದ ಮೂಲಕ ಹಾದು ಹೋಗಿರುವ ಚತುಷ್ಪಥ ಮಾರ್ಗದ ರಾಷ್ಟ್ರೀಯ ಹೆದ್ದಾರಿಯು ಶಾಲಾ ಮಕ್ಕಳು, ಸ್ಥಳೀಯ ನಿವಾಸಿಗಳ ಪಾಲಿಗೆ ಗಂಡಾಂತರಕಾರಿಯಾಗಿ ಪರಿಣಮಿಸಿದೆ!

ಸದರಿ ಹೆದ್ದಾರಿಯಲ್ಲಿ ವಾಹನಗಳ ದಟ್ಟಣೆ ಹೆಚ್ಚಿದ್ದು, ಮಿತಿಮೀರಿದ ವೇಗದಲ್ಲಿ ಸಂಚರಿಸುತ್ತಿವೆ. ಅದರಲ್ಲಿಯೂ ಹೆದ್ದಾರಿಗೆ ಹೊಂದಿಕೊಂಡಂತೆ ಸರ್ಕಾರಿ ಶಾಲೆಗಳಿದ್ದು, ಜೀವ ಕೈಯಲ್ಲಿಡಿದು ಮಕ್ಕಳು ರಸ್ತೆ ದಾಟುವಂತಹ ದುಃಸ್ಥಿತಿಯಿದೆ.
ಕಳೆದ ಕೆಲ ದಿನಗಳ ಹಿಂದಷ್ಟೆ ಪುತ್ರನನ್ನು ಶಾಲೆಗೆ ಬಿಟ್ಟು ಮನೆಗೆ ಹೋಗುತ್ತಿದ್ದ ಮಹಿಳೆಗೆ, ವೇಗವಾಗಿ ಆಗಮಿಸಿದ ಬೈಕ್ ಡಿಕ್ಕಿ ಹೊಡೆದಿತ್ತು. ಸಣ್ಣಪುಟ್ಟ ಅಪಘಾತಗಳು ಸಾಮಾನ್ಯವಾಗಿ ಪರಿಣಮಿಸಿದೆ ಎಂದು ಸ್ಥಳೀಯರು ದೂರಿದ್ದಾರೆ.

ಕಳೆದೊಂದು ವರ್ಷದ ಹಿಂದೆ ನಾಗರೀಕರ ಕೋರಿಕೆ ಮೇರೆಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯು, ಶಾಲಾ ಮಕ್ಕಳಿಗೆ ಹೆದ್ದಾರಿ ದಾಟಲು ಸ್ಕೈ ವಾಕರ್ ನಿರ್ಮಿಸಿ ಕೊಡುವುದಾಗಿ ಹೇಳಿತ್ತು. ವರ್ಷವೇ ಕಳೆದರೂ ಇಲ್ಲಿಯವರೆಗೂ ಭರವಸೆ ಕಾರ್ಯರೂಪಕ್ಕೆ ಬಂದಿಲ್ಲ.
ಮತ್ತೊಂದೆಡೆ ಸಂಚಾರಿ ಠಾಣೆ ಪೊಲೀಸರು ವಾಹನಗಳ ವೇಗ ನಿಯಂತ್ರಣಕ್ಕೆ ಬ್ಯಾರಿಕೇಡ್ ಹಾಕಿತ್ತು. ಆದರೆ ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಗಳು ಸದ್ಯ ಹೇಳ ಹೆಸರಿಲ್ಲದಂತಾಗಿದೆ.

ಮತ್ತೊಂದೆಡೆ, ಸ್ಮಾರ್ಟ್ ಸಿಟಿ ಆಡಳಿತವು ಸರ್ಕಾರಿ ಶಾಲೆ ಬಳಿಯ ಅರಳಿಕಟ್ಟೆ ಸರ್ಕಲ್ ಬಳಿ ಸಿಗ್ನಲ್ ಲೈಟ್ ಅಳವಡಿಸುವುದಾಗಿ ಹೇಳಿತ್ತು. ಸದರಿ ಅಧಿಕಾರಿಗಳು ಸ್ಥಳ ಪರಿಶೀಲನೆ ಕೂಡ ಮಾಡಿ ತೆರಳಿದ್ದರು. ಆದರೆ ಇಲ್ಲಿಯವರೆಗೂ ಸಿಗ್ನಲ್ ಲೈಟ್ ಅಳವಡಿಕೆ ಮಾಡಿಲ್ಲ. ತಕ್ಷಣವೇ ದೊಡ್ಡ ಅನಾಹುತ ಸಂಭವಿಸುವ ಮುನ್ನ ಹೆದ್ದಾರಿಯಲ್ಲಿ ಅಪಘಾತ ನಿಯಂತ್ರಣಕ್ಕೆ ಸಂಬಂಧಿಸಿದ ಆಡಳಿತಗಳು ಎಲ್ಲ ರೀತಿಯ ಅಗತ್ಯ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.

Previous post ಆರೋಗ್ಯ ಇಲಾಖೆ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸಿ : ಡಿಸಿ ಡಾ. ಆರ್.ಸೆಲ್ವಮಣಿ
Next post ‘ವಿಮಾನ ನಿಲ್ದಾಣದಲ್ಲಿ ಉದ್ಯೋಗಾವಕಾಶದ ಸುಳ್ಳು ಜಾಹೀರಾತು ನಂಬಿ ಮೋಸ ಹೋಗಬೇಡಿ’ – ಎಸ್ಪಿ ಮನವಿ!