
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಭದ್ರತಾ ವ್ಯವಸ್ಥೆ : ದೆಹಲಿಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಸಮಾಲೋಚನೆ
ದೆಹಲಿ, ಜು. 28: ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಆಗಸ್ಟ್ 31 ರಿಂದ ವಿಮಾನ ಹಾರಾಟ ಆರಂಭವಾಗುವುದು ಬಹುತೇಕ ನಿಶ್ಚಿತವಾಗಿದೆ. ಬೆಂಗಳೂರು – ಶಿವಮೊಗ್ಗ ನಡುವೆ ವಿಮಾನ ಸಂಚಾರಕ್ಕೆ ಸಂಬಂಧಿಸಿದಂತೆ, ಈಗಾಗಲೇ ಇಂಡಿಗೋ ಸಂಸ್ಥೆ ಟಿಕೆಟ್ ಬುಕ್ಕಿಂಗ್ ಕೂಡ ಆರಂಭಿಸಿದೆ.
ಈ ನಡುವೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಅಗತ್ಯ ಭದ್ರತಾ ವ್ಯವಸ್ಥೆ ಮಾಡುವ ಕುರಿತಂತೆ, ನವ ದೆಹಲಿಯಲ್ಲಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು, ನಾಗರೀಕ ವಿಮಾನಯಾನ ಭದ್ರತಾ ವಿಭಾಗದ ಮಹಾ ನಿರ್ದೇಶಕ ಜುಲ್ಫೀಕರ್ ಹಸನ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.
ವಿಮಾನಗಳ ಸಂಚಾರಕ್ಕೆ ಈಗಾಗಲೇ ದಿನಾಂಕ ನಿಗದಿಯಾಗಿದೆ. ಟಿಕೆಟ್ ಬುಕ್ಕಿಂಗ್ ಕೂಡ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ, ನಿಲ್ದಾಣಕ್ಕೆ ಅಗತ್ಯವಿರುವ ಭದ್ರತಾ ಏರ್ಪಾಡು ಮಾಡುವಂತೆ ಸಂಸದರು ಮಹಾ ನಿರ್ದೇಶಕರಿಗೆ ಮನವಿ ಮಾಡಿದ್ದಾರೆ.
ಕಾಲಮಿತಿಯೊಳಗೆ ವಿಮಾನ ನಿಲ್ದಾಣಕ್ಕೆ ಅಗತ್ಯವಾದ ಭದ್ರತಾ ಏರ್ಪಾಡು ಮಾಡುವ ಭರವಸೆಯನ್ನು ಹಿರಿಯ ಅಧಿಕಾರಿ ನೀಡಿದ್ದಾರೆ ಎಂದು, ಸಂಸದ ಬಿ.ವೈ.ರಾಘವೇಂದ್ರ ಅವರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.