ನಿಗಮ – ಮಂಡಳಿ, ನಾಮ ನಿರ್ದೇಶನ ಸ್ಥಾನಗಳಿಗೆ ‘ಕೈ’ ಪಾಳೇಯದಲ್ಲಿ ಶುರುವಾಗಿದೆ ಭಾರೀ ಲಾಬಿ!

ವರದಿ : ಬಿ. ರೇಣುಕೇಶ್

ಬೆಂಗಳೂರು / ಶಿವಮೊಗ್ಗ, ಆ. 2: ಇಷ್ಟರಲ್ಲಿಯೇ ನಿಗಮ ಮಂಡಳಿ ಹಾಗೂ ನಾಮ ನಿರ್ದೇಶನ ಸ್ಥಾನಗಳಿಗೆ ನೇಮಕ ಪ್ರಕ್ರಿಯೆಗೆ ಚಾಲನೆ ಸಿಗುವ ಸಾಧ್ಯತೆಗಳ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಪಕ್ಷದಲ್ಲಿ ಚಟುವಟಿಕೆಗಳು ಗರಿಗೆದರುವಂತೆ ಮಾಡಿದೆ. ಲಾಬಿಗಳು ಜೋರಾಗಿವೆ. 

ಕಾಂಗ್ರೆಸ್ ನ ಹಾಲಿ-ಮಾಜಿ ಶಾಸಕರುಗಳು,  ಪಕ್ಷದ ಜಿಲ್ಲಾಧ್ಯಕ್ಷರು, ವಿವಿಧ ಘಟಕಗಳ ಪದಾಧಿಕಾರಿಗಳು, ನಾಯಕರುಗಳು ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಸದಸ್ಯ, ನಿರ್ದೇಶಕ ಸ್ಥಾನ ಗಿಟ್ಟಿಸಿಕೊಳ್ಳಲು ಕಾರ್ಯಕರ್ತರು ಕಸರತ್ತು ನಡೆಸಲಾರಂಭಿಸಿದ್ದಾರೆ.

ಸರ್ಕಾರದ ಅಧೀನದಲ್ಲಿ ಒಟ್ಟಾರೆ 85 ನಿಗಮಗಳಿದ್ದು, ಅಲ್ಲಿಗೆ ನೇಮಕ ಮಾಡುವ ಪೂರ್ಣ ಅಧಿಕಾರ ಸರ್ಕಾರಕ್ಕಿದೆ. ಕಾಂಗ್ರೆಸ್ ಮೂಲಗಳ ಪ್ರಕಾರ,  ಶಾಸಕರಿಗೆ ಶೇ. 70 ರಷ್ಟು ಹಾಗೂ ಪಕ್ಷದ ಮುಖಂಡರು-ಕಾರ್ಯಕರ್ತರಿಗೆ ಶೇ. 30 ರಷ್ಟು ಆದ್ಯತೆ ನೀಡುವ ನಿರ್ಧಾರ ಮಾಡಲಾಗಿದೆ. ಎರಡೂವರೆ ವರ್ಷದ ಅವಧಿಗೆ ನೇಮಕ ಮಾಡಲಾಗುತ್ತಿದೆ ಎನ್ನಲಾಗಿದೆ. 

ಶಿವಮೊಗ್ಗ ಜಿಲ್ಲೆಯ ಲೆಕ್ಕಾಚಾರ

ಶಿವಮೊಗ್ಗ ಜಿಲ್ಲೆಯಲ್ಲಿ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರ (ಸೂಡಾ), ಭದ್ರಾ ಅಚ್ಚುಕಟ್ಟು ಪ್ರಾಧಿಕಾರ (ಕಾಡಾ), ಮಲೆನಾಡು ಪ್ರದೇಶಾಭಿವೃದ್ದಿ ಮಂಡಳಿ (ಎಂಎಡಿಬಿ) ಇದೆ. ಆದರೆ ಭದ್ರಾವತಿಯ ಎಂಪಿಎಂ ಕಾರ್ಖಾನೆ ನಷ್ಟದಲ್ಲಿರುವುದರಿಂದ ಈ ಹಿಂದಿನ ಸರ್ಕಾರದ ಅವಧಿಯಿಂದ ಅಧ್ಯಕ್ಷ, ಸದಸ್ಯರ ನೇಮಕ ಮಾಡಲಾಗುತ್ತಿಲ್ಲ. 

ಉಳಿದಂತೆ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿಗಳಿಗೆ ನಾಮ ನಿರ್ದೇಶನ ಹಾಗೂ ಸರ್ಕಾರಿ ಆಸ್ಪತ್ರೆಗಳು, ವಿಶ್ವವಿದ್ಯಾಲಯಗಳು, ಭೂ ನ್ಯಾಯ ಮಂಡಳಿಗಳು ಸೇರಿದಂತೆ ವಿವಿಧ ಇಲಾಖೆಗಳಲ್ಲಿರುವ ಸಮಿತಿಗಳಿಗೆ ಸದಸ್ಯರ ನೇಮಕ ಮಾಡುವ ಅವಕಾಶ ರಾಜ್ಯ ಸರ್ಕಾರಕ್ಕಿದೆ. 

ಈ ಕಾರಣದಿಂದ ಜಿಲ್ಲೆಯ ಕಾಂಗ್ರೆಸ್ ನಾಯಕರು, ಕಾರ್ಯಕರ್ತರ ಲಾಬಿ ಜೋರಾಗಿದೆ. ಈಗಾಗಲೇ ಪಕ್ಷದ ಪ್ರಭಾವಿ ನಾಯಕರ ಮೂಲಕ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಹಿರಿಯ ನಾಯಕರ ಗಮನ ಸೆಳೆಯುವ ಕಾರ್ಯ ನಡೆಸಲಾರಂಭಿಸಿರುವ ಮಾಹಿತಿಗಳು ಕೇಳಿಬರಲಾರಂಭಿಸಿವೆ. 

ಉಳಿದಂತೆ ಜಿಲ್ಲೆಯ ಮೂವರು ಕಾಂಗ್ರೆಸ್ ಶಾಸಕರಲ್ಲಿ, ಈಗಾಗಲೇ ಸೊರಬ ಕ್ಷೇತ್ರ ಶಾಸಕ ಮಧು ಬಂಗಾರಪ್ಪ ಅವರು ಸಚಿವರಾಗಿದ್ದಾರೆ. ಉಳಿದಿಬ್ಬರು ಶಾಸಕರಾದ ಭದ್ರಾವತಿ ಕ್ಷೇತ್ರದ  ಬಿ.ಕೆ.ಸಂಗಮೇಶ್ವರ ಹಾಗೂ ಸಾಗರ ಕ್ಷೇತ್ರ ಗೋಪಾಲಕೃಷ್ಣ ಬೇಳೂರು ಅವರು ರಾಜ್ಯ ಮಟ್ಟದ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಒಟ್ಟಾರೆ ನಿಗಮ – ಮಂಡಳಿಗಳ ಅಧ್ಯಕ್ಷ – ಸದಸ್ಯರ ನೇಮಕವು, ಕಾಂಗ್ರೆಸ್ ಪಾಳೇಯದಲ್ಲಿ ಬಿರುಸಿನ ಚಟುವಟಿಕೆಗೆ ಕಾರಣವಾಗಿರುವುದಂತೂ ಸತ್ಯವಾಗಿದೆ.

Previous post ಉಡುಪಿ ಕಾಲೇಜಿನ ಮೊಬೈಲ್ ಚಿತ್ರೀಕರಣ ಪ್ರಕರಣ: ಎಸ್.ಐ.ಟಿಗೆ ವಹಿಸುವ ಪ್ರಶ್ನೆ ಇಲ್ಲ: ಸಿಎಂ ಸಿದ್ದರಾಮಯ್ಯ
Next post ಚಿತ್ರದುರ್ಗ : ಕಲುಷಿತ ನೀರು ಸೇವನೆ ಪ್ರಕರಣ – ತನಿಖೆಗೆ ಸಿಎಂ ಆದೇಶ