
ತಾಳಗುಪ್ಪ – ಹುಬ್ಬಳ್ಳಿ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸಚಿವರಿಗೆ ಸಂಸದರ ಮನವಿ
ಶಿವಮೊಗ್ಗ, ಆ. 3: ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ದೆಹಲಿಯಲ್ಲಿ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾಗಿ, ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ರೈಲ್ವೆ ಯೋಜನೆಗಳು ಹಾಗೂ ಬಿಎಸ್ಎನ್ಎಲ್ ಮೊಬೈಲ್ ಪೋನ್ ಟವರ್ ಗಳ ಅಳವಡಿಕೆ ಕುರಿತಂತೆ ಚರ್ಚಿಸಿದರು.

ರೈಲ್ವೆ ಯೋಜನೆಗಳು : ತಾಳಗುಪ್ಪ – ಸಿದ್ದಾಪುರ – ಶಿರಸಿ – ಮುಂಡಗೋಡ – ಹುಬ್ಬಳ್ಳಿ ನಡುವಿನ 158 ಕಿ.ಮೀ. ಉದ್ದದ ರೈಲು ಮಾರ್ಗ ಯೋಜನೆಗೆ ಸಂಬಂಧಿಸಿದಂತೆ, ಈಗಾಗಲೇ ಸಮೀಕ್ಷಾ ಕಾರ್ಯ ಪೂರ್ಣಗೊಂಡಿದೆ. ಆದರೆ ಇಲ್ಲಿಯವರೆಗೂ ಮಾರ್ಗ ನಿರ್ಮಾಣಕ್ಕೆ ಅನುಮತಿ ದೊರಕಿಲ್ಲ. ಈ ಯೋಜನೆಯ ಬಗ್ಗೆ ಸಂಸದರು ಪ್ರಸ್ತಾಪಿಸಿದ್ದಾರೆ. ಮಾರ್ಗ ನಿರ್ಮಾಣಕ್ಕೆ ಅನುಮತಿ ನೀಡುವುದರ ಜೊತೆಗೆ, ಕಾಲಮಿತಿಯೊಳಗೆ ಅನುಷ್ಠಾನಕ್ಕೆ ಕ್ರಮಕೈಗೊಳ್ಳಬೇಕು ಎಂದು ಕೇಂದ್ರ ಸಚಿವರಿಗೆ ಮನವಿ ಮಾಡಿದ್ದಾರೆ.

ಶಿವಮೊಗ್ಗ – ಶಿಕಾರಿಪುರ – ರಾಣೆಬೆನ್ನೂರು ರೈಲ್ವೆ ಮಾರ್ಗ ನಿರ್ಮಾಣ, ಶಿವಮೊಗ್ಗ ಹಾಗೂ ಭದ್ರಾವತಿಯ ವಿವಿಧೆಡೆ ನಿರ್ಮಿಸಲಾಗುತ್ತಿರುವ ನಾಲ್ಕು ರೈಲ್ವೆ ಮೇಲ್ಸೇತುವೆ ಮತ್ತು ಕೋಟೆಗಂಗೂರಿನಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಕೋಚಿಂಗ್ ಡಿಪೋ ಕಾಮಗಾರಿಗಳನ್ನು ತ್ವರಿತಗೊಳಿಸಬೇಕು. ನಿಗದಿತ ಅವದಿಗಿಂತ ಮುಂಚಿತವಾಗಿ ಪೂರ್ಣಗೊಳಿಸಬೇಕು. ಜೊತೆಗೆ ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಸಚಿವರಿಗೆ ಕೋರಿದ್ದಾರೆ.
ಶಿವಮೊಗ್ಗ – ಬೆಂಗಳೂರು ನಡುವೆ ಸಂಚರಿಸುವ ರೈಲುಗಳ ವೇಗ ಹೆಚ್ಚಳ ಮತ್ತು ಸಮಯ ಬದಲಾವಣೆ ಕುರಿತಂತೆ ಚರ್ಚಿಸಿದ್ದಾರೆ. ಕುಂಸಿ, ಹಾರನಹಳ್ಳಿ, ಅರಸಾಳು ಮತ್ತು ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೈಂದೂರು, ಶಿರೂರು, ಬಿಜೂರು ಹಾಗೂ ಸೇನಾಪುರ ರೈಲ್ವೇ ನಿಲ್ದಾಣಗಳಲ್ಲಿ ಸ್ಥಳೀಯ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಹೆಚ್ಚಿನ ರೈಲುಗಳು ನಿಲುಗಡೆಗೆ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದ್ದಾರೆ.

ಮೊಬೈಲ್ ಟವರ್ : ಶಿವಮೊಗ್ಗ ಜಿಲ್ಲೆಗೆ ಮಂಜೂರು ಮಾಡಲಾಗಿರುವ ಬಿಎಸ್ಎನ್ಎಲ್ ಮೊಬೈಲ್ ಪೋನ್ ಟವರ್ ಗಳ ಅನುಷ್ಠಾನದ ಬಗ್ಗೆ ಸಚಿವರೊಂದಿಗೆ ಸಂಸದರು ಚರ್ಚಿಸಿದ್ದಾರೆ.
ಮಂಜೂರು ಮಾಡಲಾಗಿರುವ ಕೆಲವು ಸ್ಥಳಗಳಲ್ಲಿ ಬೇರೆ ನೆಟ್ ವರ್ಕ್ ಸಿಗ್ನಲ್ ಗಳು ಸಿಗುತ್ತಿರುವ ಮಾಹಿತಿಯಿದೆ. ಈ ಕಾರಣದಿಂದ ಬೇರೆ ಸ್ಥಳಗಳಲ್ಲಿ ಟವರ್ ಸ್ಥಾಪನೆಗೆ ಅನುಮತಿ ನೀಡುವಂತೆ ಸಚಿವರಲ್ಲಿ ಸಂಸದರು ಇದೇ ವೇಳೆ ಮನವಿ ಮಾಡಿದ್ದಾರೆ.