ಪ್ರಚೋದನಾತ್ಮಕ ವೀಡಿಯೋ : ಸೋಶಿಯಲ್ ಮೀಡಿಯಾಗಳ ಮೇಲೆ ಪೊಲೀಸರ ಹದ್ದಿನ ಕಣ್ಣು – ಕಠಿಣ ಕ್ರಮದ ಎಚ್ಚರಿಕೆ!

ಶಿವಮೊಗ್ಗ, ಆ. 4: ಪ್ರಚೋದನಾತ್ಮಕ ಹಾಗೂ ಸಮಾಜದ ಶಾಂತಿ-ಸುವ್ಯವಸ್ಥೆಗೆ ಧಕ್ಕೆ ತರುವ ವೀಡಿಯೋ ತುಣುಕುಗಳನ್ನು, ಸಾಮಾಜಿಕ ಜಾಲತಾಣ (ಸೋಶಿಯಲ್ ಮೀಡಿಯಾ) ಗಳಲ್ಲಿ ಹರಿಬಿಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.

ಈ ಕುರಿತಂತೆ ಪೊಲೀಸ್ ಇಲಾಖೆಯು ಶುಕ್ರವಾರ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ಹೊರ ರಾಜ್ಯಗಳಲ್ಲಿ ನಡೆದ ವಿವಿಧ ಘಟನೆಗಳಿಗೆ ಸಂಬಂಧಿಸಿದ ವೀಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಸದರಿ ವೀಡಿಯೋ ತುಣುಕುಗಳು ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದ ವೀಡಿಯೋಗಳು ಆಗಿರುವುದಿಲ್ಲ ಎಂದು ತಿಳಿಸಿದೆ.

ನೈಜ ಸುದ್ದಿಗಳನ್ನು ತಿರುಚಿ ಫೇಸ್‍ಬುಕ್, ವ್ಯಾಟ್ಸಾಪ್, ಇನ್ಸ್ಟಾಗ್ರಾಂ, ಟ್ವಿಟರ್ ಮತ್ತು ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಿವುದು ಕಾನೂನು ರೀತ್ಯಾ ಶಿಕ್ಷಾರ್ಹ ಅಪರಾಧವಾಗಿರುತ್ತದೆ.

ಸಾಮಾಜಿಕ ಜಾಲತಾಣಗಳ ಮೇಲೆ ಪೊಲೀಸ್ ಇಲಾಖೆಯು ನಿರಂತರವಾಗಿ ನಿಗಾ ಇಟ್ಟಿರುತ್ತದೆ. ಯಾವುದೇ ಪ್ರಚೋದನಾತ್ಮಕ ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವುದು ಪೊಲೀಸ್ ಇಲಾಖೆಯ ಗಮನಕ್ಕೆ ಬಂದರೆ, ಸದರಿ ವೀಡಿಯೋ ಹಾಕಿದ ವ್ಯಕ್ತಿಗಳು ಪೊಲೀಸ್ ಇಲಾಖೆಗೆ ಸೂಕ್ತ ಸ್ಪಷ್ಟನೆ ನೀಡಬೇಕಾಗುತ್ತದೆ. ಒಂದು ವೇಳೆ ಕಾನೂನು ಉಲ್ಲಂಘನೆ ಮಾಡಿರುವುದು ಕಂಡು ಬಂದಲ್ಲಿ, ಅಂತಹ ವ್ಯಕ್ತಿಗಳು ಮತ್ತು ಗ್ರೂಪ್ ಅಡ್ಮಿನ್ ಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಸಾರ್ವಜನಿಕರು ಯಾವುದೇ ರೀತಿಯ ಸುಳ್ಳು ಸುದ್ಧಿಗಳಿಗೆ ಕಿವಿಗೊಡಬಾರದು ಮತ್ತು ಪ್ರಚೋದನೆಗೆ ಒಳಗಾಗಬಾರದು‌. ಹಾಗೂ ಯಾವುದೇ ಸುಳ್ಳು, ಪ್ರಚೋದನಾತ್ಮಕ ವೀಡಿಯೋ, ಪೋಸ್ಟ್, ಸುದ್ಧಿಗಳ ಸತ್ಯಾಸತ್ಯತೆಯನ್ನು ತಿಳಿಯದೇ ಫಾರ್ವರ್ಡ್ / ಪೋಸ್ಟ್ / ಟ್ವೀಟ್ ಮಾಡಬಾರದು. ಪ್ರಚೋದನಾತ್ಮಕ ವೀಡಿಯೋಗಳ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವುದರ ಜೊತೆಗೆ ಅದರ ಸತ್ಯಾಸತ್ಯತೆ ಅರಿತುಕೊಳ್ಳಬೇಕು ಎಂದು ನಾಗರೀಕರಿಗೆ ಪೊಲೀಸ್ ಇಲಾಖೆಯು ಮನವಿ ಮಾಡಿದೆ.

Previous post ಎಲ್ಲ ಅಂಗಡಿ – ವಾಣಿಜ್ಯ ಸಂಸ್ಥೆಗಳ ನೋಂದಣಿ ಕಡ್ಡಾಯ : ಕಾರ್ಮಿಕ ಇಲಾಖೆ ಪ್ರಕಟಣೆ
Next post ತೀರ್ಥಹಳ್ಳಿ, ಸೊರಬದಲ್ಲಿ ಅರಣ್ಯ ನಾಶಕ್ಕೆ ಕಡಿವಾಣ : ಸಚಿವ ಈಶ್ವರ ಖಂಡ್ರೆ