
ಪತ್ನಿ, ಪ್ರಿಯಕರನ ಬರ್ಬರ ಹತ್ಯೆ ಪ್ರಕರಣ : ಪತಿ ಆತನ ಇಬ್ಬರು ಸ್ನೇಹಿತರಿಗೆ ಜೀವಾವಧಿ ಶಿಕ್ಷೆ!
ಶಿವಮೊಗ್ಗ, ಆ.10: ಪತ್ನಿ ಹಾಗೂ ಪ್ರಿಯಕರನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪತಿ ಸೇರಿದಂತೆ ಮೂವರಿಗೆ ಶಿವಮೊಗ್ಗದ 3 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ತಲಾ 1 ಲಕ್ಷ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.
ಶಿವಮೊಗ್ಗದ ವೆಂಕಟೇಶ್ವರ ನಗರ 5 ನೇ ಕ್ರಾಸ್ ನಿವಾಸಿಯಾದ ಪತಿ ಕಾರ್ತಿಕ್ ಕೆ (28) ಹಾಗೂ ಆತನ ಸ್ನೇಹಿತರಾದ ಭರತ್ ವಿ (23) ಮತ್ತು ಸಂದೀಪ್ (21) ಶಿಕ್ಷೆಗೊಳಗಾದವರೆಂದು ಗುರುತಿಸಲಾಗಿದೆ.
ನ್ಯಾಯಾಧೀಶರಾದ ಕೆ.ಎಸ್. ಮಾನು ಅವರು ಆ. 9 ರಂದು ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಜೆ.ಶಾಂತರಾಜ್ ಅವರು ವಾದ ಮಂಡಿಸಿದ್ದರು.
ಪ್ರಕರಣದ ಹಿನ್ನೆಲೆ: ಶಿಕ್ಷೆಗೊಳಗಾದ ಕಾರ್ತಿಕ್ ಹಾಗೂ ಶ್ರೀರಾಮನಗರದ ನಿವಾಸಿ ರೇವತಿ (21) ರವರ ನಡುವೆ 04-09-2017 ರಂದು ಮದುವೆಯಾಗಿತ್ತು. ವಿವಾಹಕ್ಕೂ ಮೊದಲೇ ರೇವತಿಯು ತನ್ನ ಮನೆ ಎದುರಿನ ಯುವಕ ವಿಜಯ್ (22) ಎಂಬಾತನನ್ನು ಪ್ರೀತಿಸುತ್ತಿದ್ದಳು. ಆದರೆ ಕುಟುಂಬದವರ ಒತ್ತಾಯಕ್ಕೆ ಮಣಿದು ಕಾರ್ತಿಕ್ ನನ್ನು ಮದುವೆಯಾಗಿದ್ದಳು.
ವಿವಾಹವಾದ ನಂತರ ಪತಿಯೊಂದಿಗೆ ಗಲಾಟೆ ಮಾಡಿಕೊಂಡ ರೇವತಿಯು ತವರು ಮನೆಗೆ ವಾಪಾಸ್ಸಾಗಿದ್ದಳು. ನಂತರ ಬುದ್ದಿಮಾತು ಹೇಳಿ ಪತಿ ಮನೆಗೆ ಕರೆತರಲಾಗಿತ್ತು. ತದನಂತರ ರೇವತಿಯು ಪತಿ ಮನೆಯಿಂದ ಕಣ್ಮರೆಯಾಗಿದ್ದಳು.
ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಪೊಲೀಸರು ರೇವತಿಯನ್ನು ಪತ್ತೆ ಹಚ್ಚಿ ಠಾಣೆಗೆ ಕರೆತಂದಿದ್ದರು. ಈ ವೇಳೆ ರೇವತಿಯು ಪತಿ ಕಾರ್ತಿಕ್ ಜೊತೆ ತೆರಳಲು ನಿರಾಕರಿಸಿದ್ದಳು. ಮತ್ತೆ ತವರು ಮನೆಗೆ ಹಿಂದಿರುಗಿದ್ದಳು.
ವಿಜಯ್ ನನ್ನು ಪ್ರೀತಿಸುತ್ತಿರುವುದರಿಂದ ರೇವತಿ ಮನೆಗೆ ಬರುತ್ತಿಲ್ಲ ಎಂದು ಬೇಸರಗೊಂಡ ಕಾರ್ತಿಕ್ ನು, ತನ್ನ ಸ್ನೇಹಿತರ ಜೊತೆಗೂಡಿ ಪತ್ನಿ ಹಾಗೂ ಪ್ರಿಯಕರನ ಹತ್ಯೆಗೆ ನಿರ್ಧರಿಸಿದ್ದ.
ಅದರಂತೆ 1-10-2017 ರಂದು ಕಾರ್ತಿಕನು, ಮಾತನಾಡುಬೇಕು ಎಂದು ಹೇಳಿ ರೇವತಿಯನ್ನು ಆಕೆಯ ತವರು ಮನೆಯಿಂದ ವಡ್ಡಿನಕೊಪ್ಪ ಗ್ರಾಮದ ಎನ್.ಆರ್.ಪುರ ರಸ್ತೆಯ ತೋಟವೊಂದರ ಬಳಿ ಕರೆತಂದಿದ್ದ. ನಂತರ ಪತ್ನಿಯ ಪ್ರಿಯಕರ ವಿಜಯ್ ನನ್ನು ಕೂಡ ಫೋನ್ ಮಾಡಿ ವಡ್ಡಿನಕೊಪ್ಪಕ್ಕೆ ಕರೆಯಿಸಿಕೊಂಡಿದ್ದ.
ಈ ವೇಳೆ ಸ್ಥಳಕ್ಕಾಗಮಿಸಿದ ಸ್ನೇಹಿತರ ಜೊತೆಗೂಡಿ, ವಿಜಯ್ ಹಾಗೂ ರೇವತಿಯ ಮೇಲೆ ಮಾರಕಾಸ್ತ್ರ ಹಾಗೂ ಕಲ್ಲಿನಿಂದ ದಾಳಿ ನಡೆಸಿ ಕೊಲೆ ಮಾಡಿದ್ದ.
ಈ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಸರ್ಕಲ್ ಇನ್ಸ್’ಪೆಕ್ಟರ್ ಆಗಿದ್ದ ಮಹಾಂತೇಶ್ ಬಿ ಹೊಳಿ ಅವರು ಪ್ರಕರಣದ ತನಿಖೆ ನಡೆಸಿದ್ದರು. ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಪತ್ತೆಯಾಗದ ಆರೋಪಿ: ಸದರಿ ಪ್ರಕರಣದ ಮೂರನೇ ಆರೋಪಿ ಸತೀಶ್ ಎಂಬಾತ ತಲೆಮರೆಸಿಕೊಂಡಿದ್ದಾನೆ. ಈತನ ವಿರುದ್ದ ಪ್ರತ್ಯೇಕ ದೋಷಾರೋಪಣ ಪಟ್ಟಿ ದಾಖಲಿಸಲಾಗಿದ್ದು, ವಿಚಾರಣೆ ಬಾಕಿಯಿರುತ್ತದೆ.