
‘ನಯ ವಂಚಕರ ಮಾತು ನಂಬಿ ಹಣ ಕಳೆದುಕೊಳ್ಳಬೇಡಿ’ : ಸಬ್ ಇನ್ಸ್’ಪೆಕ್ಟರ್ ಮಂಜುನಾಥ್
ಶಿವಮೊಗ್ಗ, ಆ. 12: ‘ನಯ ವಂಚಕರ ಮಾತು ನಂಬಿ ಕಷ್ಟಪಟ್ಟು ಸಂಪಾದಿಸಿದ ಹಣ ಕಳೆದುಕೊಳ್ಳಬೇಡಿ. ತಮ್ಮ ಪ್ರದೇಶದಲ್ಲಿ ನಡೆಯುವ ಅಪರಾಧ ಚಟುವಟಿಕೆಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ’ ಎಂದು ಶಿವಮೊಗ್ಗ ವಿನೋಬನಗರ ಠಾಣೆ ಸಬ್ ಇನ್ಸ್’ಪೆಕ್ಟರ್ ಎನ್. ಮಂಜುನಾಥ್ ಅವರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಶನಿವಾರ ಸಂಜೆ ನಗರದ ಹೊರವಲಯ ಸೋಮಿನಕೊಪ್ಪ ಪ್ರೆಸ್ ಕಾಲೋನಿಯಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಆನ್’ಲೈನ್ ವಂಚಕರ ಬಗ್ಗೆ ಎಚ್ಚರಿಕೆಯಿಂದಿರಿ. ಲಕ್ಕಿ ಡ್ರಾದಲ್ಲಿ ಹಣ ಗೆದ್ದಿದ್ದಿರಿ, ಬಹುಮಾನ ಬಂದಿದೆ ಎಂಬಿತ್ಯಾದಿ ಸಂದೇಶ ನಂಬಿ ಹಣ ಹಾಕಬೇಡಿ. ಆನ್’ಲೈನ್ ಬ್ಯಾಂಕಿಂಗ್ ವ್ಯವಹಾರ ನಡೆಸುವಾಗ ಜಾಗೃತವಾಗಿರಿ. ಸೈಬರ್ ವಂಚನೆಗೊಳಗಾದಾದ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ. ಸಕಾಲದಲ್ಲಿ ಮಾಹಿತಿ ಲಭ್ಯವಾದಲ್ಲಿ ವಂಚನೆಗೊಳಗಾದ ಹಣ ವಾಪಾಸ್ ಪಡೆಯಲು ಅವಕಾಶವಿರುತ್ತದೆ ಎಂದು ತಿಳಿಸಿದರು.

ಅಪಘಾತ ಸೇರಿದಂತೆ ಯಾವುದೇ ರೀತಿಯ ತುರ್ತು ಸಂದರ್ಭಗಳ ವೇಳೆ 112 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿ. ಕಾಲಮಿತಿಯೊಳಗೆ ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ನೆರವಾಗಲಿದ್ದಾರೆ ಎಂದು ಹೇಳಿದರು.
ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಎಚ್ಚರಿಕೆಯಿಂದಿರಿ. ಮನೆಗಳಲ್ಲಿ ಮಹಿಳೆಯರು ಓರ್ವರೇ ಇದ್ದಾಗ, ಅಪರಿಚಿತರಿಗೆ ಬಾಗಿಲು ತೆರೆಯಬೇಡಿ. ಚಿನ್ನಾಭರಣ ಧರಿಸಿ ಓಡಾಡುವಾಗ ಜಾಗೃತರಾಗಿರಿ. ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ 112 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿ ಎಂದು ಸಲಹೆ ನೀಡಿದರು.

ಹೊರವಲಯ ನಿರ್ಜನ ಪ್ರದೇಶಗಳಲ್ಲಿ ಪೊಲೀಸರು ನಿರಂತರವಾಗಿ ಗಸ್ತು ತಿರುಗುತ್ತಿರುತ್ತಾರೆ. ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುವವರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಲಾಗುವುದು. ನಾಗರೀಕರ ರಕ್ಷಣೆಗೆ ಪೊಲೀಸ್ ಇಲಾಖೆ ಸದಾ ಸನ್ನದ್ಧವಾಗಿರುತ್ತದೆ ಎಂದು ಎನ್. ಮಂಜುನಾಥ್ ಹೇಳಿದರು.
ಅಹವಾಲು: ಈ ವೇಳೆ ಪತ್ರಕರ್ತ ಬಿ.ರೇಣುಕೇಶ್ ಅವರು ಮಾತನಾಡಿ, ‘ಬಿ – ಬೀಟ್ ವ್ಯವಸ್ಥೆ ಆರಂಭಿಸಬೇಕು. ರಾತ್ರಿ ವೇಳೆ ಪೊಲೀಸ್ ಗಸ್ತು ವಾಹನ ಸಂಚಾರಕ್ಕೆ ಕ್ರಮಕೈಗೊಳ್ಳಬೇಕು. ಸಂಜೆ ವೇಳೆ ಮಾದಕ ವಸ್ತುಗಳ ಸೇವನೆ ಮಾಡಲು ಆಗಮಿಸುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಇವರ ಉಪಟಳಕ್ಕೆ ಕಡಿವಾಣ ಹಾಕಬೇಕು’ ಎಂದು ಸಲಹೆ ನೀಡಿದರು. ಗಸ್ತು ಮತ್ತೀತರ ವಿಷಯಗಳ ಕುರಿತಂತೆ ನಿವಾಸಿಗಳು ಅಹವಾಲು ತೋಡಿಕೊಂಡರು.
ಈ ಸಂದರ್ಭದಲ್ಲಿ ವಿನೋಬನಗರ ಪೊಲೀಸ್ ಠಾಣೆ ಸಿಬ್ಬಂದಿಗಳಾದ ರಾಘವೇಂದ್ರ ಎಸ್.ಕೆ., ಉಮೇಶ್ ಎನ್, ಭರತ್ ಎಸ್ ಉಪಸ್ಥಿತರಿದ್ದರು.