
‘ಹೋರಾಟಗಾರರ ತ್ಯಾಗದ ಫಲದಿಂದ ಸ್ವಾತಂತ್ರ್ಯ’ : ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ
ಶಿವಮೊಗ್ಗ, ಆ. 15: ‘ವಿದೇಶಿಯರ ಆಡಳಿತದಿಂದ ದೇಶವನ್ನು ಮುಕ್ತಗೊಳಿಸಲು ಲಕ್ಷಾಂತರ ಜನರು ಜಾತಿ, ಮತ, ಪಂಥ ತೊರೆದು ಹೋರಾಟ ನಡೆಸಿದ್ದಾರೆ. ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ್ದಾರೆ. ಹೋರಾಟಗಾರರ ತ್ಯಾಗದ ಫಲ ಇಂದಿನ ಸ್ವಾತಂತ್ರ್ಯ ದಿನಾಚರಣೆಯಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ತಿಳಿಸಿದ್ದಾರೆ.
ಶಿವಮೊಗ್ಗ ನಗರದ ಡಿಎಆರ್ ಮೈದಾನದಲ್ಲಿ ಮಂಗಳವಾರ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದ್ದ 77 ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿದ ನಂತರ, ಸಾರ್ವಜನಿಕರನ್ನುದ್ದೇಶಿಸಿ ಅವರು ತಮ್ಮ ಸಂದೇಶ ನೀಡಿದರು.

ವ್ಯಾಪಾರ ನಡೆಸಲು ಆಗಮಿಸಿದ ಬ್ರಿಟಿಷರು, ಇಡೀ ದೇಶವನ್ನೇ ಆಳಿದರು. ಅವರ ದಬ್ಬಾಳಿಕೆಯಿಂದ ಮುಕ್ತಿ ಹೊಂದಿ ಸ್ವಾತಂತ್ರ ಪಡೆದ ಶುಭದಿನವಾಗಿದೆ. ಶಿವಮೊಗ್ಗ ಜಿಲ್ಲೆಯ ಅನೇಕರು ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದರು. ವಿಶೇಷವಾಗಿ ಬ್ರಿಟೀಷರ ವಿರುದ್ಧ ಹೋರಾಡಿದ ಈಸೂರಿನ ಸ್ವಾತಂತ್ರ್ಯ ಹೋರಾಟಗಾರರ ನೆನಪು ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಈಸೂರಿನ ಐವರು ಹೋರಾಟಗಾರರು ನೇಣಿಗೆ ಕೊರಳೊಡ್ಡಿ ಹುತಾತ್ಮರಾಗಿದ್ದು ನಿಜಕ್ಕೂ ನೋವಿನ ಸಂಗತಿಯಾಗಿದೆ. ಎಲ್ಲ ಹೋರಾಟಗಾರರಿಗೆ ಕೋಟಿ ಕೋಟಿ ನಮನ ಸಲ್ಲಿಸುವುದಾಗಿ ಹೇಳಿದರು.

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ, ದೇಶ ಎದುರಿಸುತ್ತಿದ್ದ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಸಫಲರಾಗಿದ್ದೆವೆ. ಹಸಿವು, ಬಡತನ, ದಾರಿದ್ಯ, ಅನಕ್ಷರತೆ ಸಮಸ್ಯೆಗಳನ್ನು ಬಗೆಹರಿಸಲಾಗಿದೆ ಎಂದರು.
ಶಿಕ್ಷಣ ಇಲಾಖೆಯ ಸಮಸ್ಯೆಗಳ ಪರಿಹಾರಕ್ಕೆ ಕ್ರಮ
‘ಶಿಕ್ಷಣ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ, ಶಿಕ್ಷಣ ಇಲಾಖೆಯ ಸಮಸ್ಯೆಗಳ ಪರಿಹಾರಕ್ಕೆ ಕ್ರಮಕೈಗೊಂಡಿದ್ದೆನೆ. ಮಕ್ಕಳಿಗೆ ಸಮವಸ್ತ್ರ, ಪಠ್ಯಪುಸ್ತಕ, ಶೂಗಳನ್ನು ಪೂರೈಸಲಾಗಿದೆ. ಈ ಹಿಂದೆ 1 ರಿಂದ 8 ನೇ ತರಗತಿಯ ವಿದ್ಯಾರ್ಥಿಗಳಿಗೆ ವಾರಕ್ಕೆ 1 ಮೊಟ್ಟೆಯನ್ನು ನೀಡುತ್ತಿದ್ದು, ಈಗ ವಾರಕ್ಕೆ 2 ಮೊಟ್ಟೆ ನೀಡುವುದರರೊಂದಿಗೆ 10 ನೇ ತರಗತಿವರೆಗೆ ಈ ಯೋಜನೆಯನ್ನು ವಿಸ್ತರಿಸಲಾಗಿದೆ’ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಿಗೆ 2 ಬಾರಿ ಪೂರಕ ಪರೀಕ್ಷೆಗೆ ಅವಕಾಶ ನೀಡಲಾಗಿದೆ. ಇದರಿಂದ ಉನ್ನತ ಶಿಕ್ಷಣಕ್ಕೆ ಸೇರುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಶಿಕ್ಷಕರ ನೇಮಕಾತಿ, ನೂತನ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ. ಸಂವಿಧಾನದ ಮಹತ್ವ ಅರಿಯಲು, ಸಂವಿಧಾನದ ಆಶಯವನ್ನು ಪ್ರತಿದಿನ ಶಾಲೆಗಳ ಪ್ರಾರ್ಥನೆಯ ಸಮಯದಲ್ಲಿ ಮಕ್ಕಳಿಂದ ಓದಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿರುವ ಗ್ರಂಥಾಲಯಗಳನ್ನು ಮೇಲ್ದರ್ಜೆಗೇರಿಸಿ, ಅತ್ಯಾಧುನಿಕ ಹಾಗೂ ಸುಸಜ್ಜಿತ ಇ-ಲೈಬ್ರರಿಗಳನ್ನಾಗಿ ಪರಿವರ್ತಿಸುವ ಕಾರ್ಯ ಪ್ರಗತಿಯಲ್ಲಿದೆ. ಇದರಿಂದಾಗಿ ಗ್ರಾಮೀಣ ಜನರ ಬೌದ್ಧಿಕ ವಿಕಾಸಗೊಳಿಸಲು ಹಾಗೂ ಸಮಾಜದ ಮುಖ್ಯವಾಹಿನಿಗೆ ಕರೆತರಲು ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ ಎಂದು ತಿಳಿಸಿದ್ದಾರೆ.
ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಪರಿಹಾರಕ್ಕೆ ಕ್ರಮ
ದಶಕಗಳಿಂದ ಕಗ್ಗಂಟಾಗಿರುವ ಶರಾವತಿ ಮುಳುಗಡೆ ಸಂತ್ರಸ್ಥರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ, ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳು ವಿಶೇಷ ಆಸಕ್ತಿ ವಹಿಸಿದ್ದಾರೆ. ಶೀಘ್ರದಲ್ಲಿಯೇ ಸದರಿ ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಕ್ರಮವಹಿಸಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದ್ದಾರೆ.
ಅರಣ್ಯ ಮತ್ತು ಕಂದಾಯ ಇಲಾಖೆಯ ನಡುವಿನ ಭೂಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಉದ್ದೇಶಿಸಲಾಗಿದೆ. ಅಡಕೆಗೆ ಬಾಧಿಸುತ್ತಿರುವ ಎಲೆಚುಕ್ಕೆ ರೋಗವು ಕೃಷಿಕರಿಗೆ ಆತಂಕ ತಂದೊಡ್ಡಿದೆ. ಜೊತೆಗೆ ಮಾರುಕಟ್ಟೆ ಅಸ್ಥಿರತೆ ಹೋಗಲಾಡಿಸುವ ನಿಟ್ಟಿನಲ್ಲಿ, ಸರ್ಕಾರವು ರೈತರ ಹಿತರಕ್ಷಣೆಗೆ ಬದ್ದವಾಗಿದೆ. ಜಿಲ್ಲೆಯಲ್ಲಿ ಭತ್ತದ ಬೆಳೆ ಕಡಿಮೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಭತ್ತದ ಬೆಳೆ ಪ್ರೋತ್ಸಾಹಿಸಲು ಚಿಂತನೆ ನಡೆದಿದೆ ಎಂದರು.
ಜಿಲ್ಲೆಯಲ್ಲಿ ವೃತ್ತಿಪರ ಶಿಕ್ಷಣ ಮತ್ತು ಕೈಗಾರಿಕೆಗಳ ಅಭಿವೃದ್ಧಿಗೆ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ಅಂತೆಯೇ ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಂತೆ ನಗರದ ಪ್ರಮುಖ ಸ್ಥಳದಲ್ಲಿ ಜಿಲ್ಲಾಡಳಿತ ಭವನ ನಿರ್ಮಾಣ ಹಾಗೂ ಆಯುಷ್ ವಿಶ್ವವಿದ್ಯಾಲಯ ಆರಂಭಿಸಲು ವಿಶೇಷ ಗಮನ ಹರಿಸಲಾಗುವುದು ಎಂದು ಹೇಳಿದ್ದಾರೆ.