
ಶಿವಮೊಗ್ಗ – ಅಂತಿಮ ಹಂತಕ್ಕೆ ಫ್ಲೈ ಓವರ್ ಕಾಮಗಾರಿ : ಉದ್ಘಾಟನೆ ಯಾವಾಗ..?
-ಬಿ. ರೇಣುಕೇಶ್-
ಶಿವಮೊಗ್ಗ, ಆ. 16: ಶಿವಮೊಗ್ಗ ನಗರದ ಹೊರವಲಯ ಕಾಶೀಪುರ ರೈಲ್ವೆ ಗೇಟ್ ಬಳಿ ನಿರ್ಮಿಸಲಾಗುತ್ತಿರುವ, ರೈಲ್ವೆ ಫ್ಲೈ ಓವರ್ (ಮೇಲ್ಸೇತುವೆ) ಕಾಮಗಾರಿ ಅಂತೂ ಇಂತೂ ಕೊನೆಗೂ ಅಂತಿಮ ಹಂತಕ್ಕೆ ಬರಲಾರಂಭಿಸಿದೆ. ಸದ್ಯ ಡಾಂಬರೀಕರಣ ಕಾಮಗಾರಿಗೆ ಚಾಲನೆ ದೊರಕಿದೆ.

ಈಗಾಗಲೇ ಫ್ಲೈ ಓವರ್ ನ ಆರ್ಚ್, ತಡೆಗೋಡೆ, ಪಾದಚಾರಿ ಮಾರ್ಗ ಸೇರಿದಂತೆ ಮುಖ್ಯ ಕಾಮಗಾರಿಗಳು ಪೂರ್ಣಗೊಂಡಿವೆ. ಆರ್ಚ್ ಬಳಿ ಡಾಂಬರೀಕರಣ, ಪೈಂಟಿಂಗ್, ಪ್ಲಂಬಿಂಗ್ ಮತ್ತೀತರ ಕೆಲಸಗಳು ನಡೆಯುತ್ತಿವೆ. ಉಳಿದಂತೆ ಎರಡು ಬದಿ ಡಾಂಬರೀಕರಣ, ವಿದ್ಯುತ್ ದೀಪ, ಸಂಚಾರಿ ನಿಯಮಗಳ ಫಲಕ ಅಳವಡಿಕೆ ಸೇರಿದಂತೆ ಇನ್ನಿತರೆ ತಾಂತ್ರಿಕ ಕೆಲಸ ಕಾರ್ಯಗಳು ನಡೆಯಬೇಕಾಗಿದೆ.

ಆದರೆ ನಿರೀಕ್ಷಿತ ವೇಗದಲ್ಲಿ ಕಾಮಗಾರಿ ನಡೆಯುತ್ತಿಲ್ಲ ಎಂಬ ದೂರು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಸರಿಸುಮಾರು ಕಳೆದ ಎರಡೂವರೆ ವರ್ಷಗಳ ಹಿಂದೆ ಫ್ಲೈ ಓವರ್ ಕಾಮಗಾರಿ ಆರಂಭಿಸಲಾಗಿತ್ತು. ಆದರೆ ವಿಳಂಬಗತಿಯ ಕೆಲಸಕಾರ್ಯದಿಂದ ಇಲ್ಲಿಯವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ನಾಗರೀಕರು ದೂರುತ್ತಾರೆ.

ಫ್ಲೈ ಓವರ್ ಸಮೀಪದ ಮುಖ್ಯ ರಸ್ತೆಯಲ್ಲಿ ವಾಹನಗಳ ಸಂಚಾರ ದುಸ್ತರವಾಗಿ ಪರಿಣಮಿಸಿದೆ. ಸಮೀಪದ ಕಾಶೀಪುರ ಬಡಾವಣೆಯ ರಸ್ತೆಗಳಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿಸಿದೆ. ರಸ್ತೆ ಇಕ್ಕೆಲಗಳ ನಿವಾಸಿಗಳ ಗೋಳು ಹೇಳತೀರದಂತಾಗಿದೆ.

ಯಾವಾಗ ಫ್ಲೈ ಓವರ್ ಕಾಮಗಾರಿ ಪೂರ್ಣಗೊಂಡು, ವಾಹನಗಳ ಸಂಚಾರಕ್ಕೆ ಮುಕ್ತಗೊಳ್ಳಲಿದೆಯೋ? ಸಂಚಾರ ದಟ್ಟಣೆಯ ಕಿರಿಕಿರಿಗೆ ಮುಕ್ತಿ ದೊರಕಲಿದೆಯೋ? ಎಂದು ಸ್ಥಳೀಯ ನಾಗರೀಕರು ಪ್ರಶ್ನಿಸುತ್ತಾರೆ.
ರಸ್ತೆ ದುರಸ್ತಿಗೆ ಆಗ್ರಹ: ಫ್ಲೈ ಓವರ್ ಕಾಮಗಾರಿ ಕಾರಣದಿಂದ ದೇವರಾಜ ಅರಸು ನಗರ ಸಮೀಪದಿಂದ ಪೆಟ್ರೋಲ್ ಬಂಕ್ ವರೆಗಿನ ರಸ್ತೆಯು ಗುಂಡಿ – ಗೊಟರು ಬಿದ್ದಿದೆ. ಜನ – ವಾಹನ ಸಂಚಾರ ದುಸ್ತರವಾರಿ ಪರಿಣಮಿಸಿದೆ.

ಫ್ಲೈ ಓವರ್ ಕಾಮಗಾರಿ ಪೂರ್ಣಗೊಳ್ಳುವುದರೊಳಗೆ ಸದರಿ ರಸ್ತೆ ದುರಸ್ತಿಗೆ ಪಿಡಬ್ಲ್ಯೂಡಿ ಹಾಗೂ ರೈಲ್ವೆ ಇಲಾಖೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಾರೆ.