
ಶಿವಮೊಗ್ಗ – ಹಾಳಾಗುತ್ತಿರುವ ಬಸ್ ನಿಲ್ದಾಣ ಕಾಮಗಾರಿ : ಎಚ್ಚೆತ್ತುಕೊಳ್ಳುವುದೆ ಸ್ಮಾರ್ಟ್ ಸಿಟಿ ಆಡಳಿತ?
ಶಿವಮೊಗ್ಗ, ಆ. 18: ಸ್ಮಾರ್ಟ್ ಸಿಟಿ ಯೋಜನೆಯಡಿ, ಶಿವಮೊಗ್ಗ ನಗರದ ವಿವಿಧೆಡೆ ಕೋಟ್ಯಾಂತರ ರೂ. ವೆಚ್ಚದಲ್ಲಿ ಬಸ್ ನಿಲ್ದಾಣಗಳನ್ನು ಅಭಿವೃದ್ದಿಪಡಿಸಲಾಗಿದೆ. ಆದರೆ ಹಲವೆಡೆ ಅರ್ಧಂಬರ್ಧ ಕಾಮಗಾರಿ ಹಾಗೂ ನಿರ್ಲಕ್ಷ್ಯ ಧೋರಣೆಯಿಂದ, ಬಸ್ ನಿಲ್ದಾಣಗಳಲ್ಲಿ ಮಾಡಿದ್ದ ಕೆಲಸಕಾರ್ಯಗಳು ಹಾಳಾಗುತ್ತಿವೆ. ನಾಗರೀಕರ ಅಮೂಲ್ಯ ತೆರಿಗೆ ಹಣ ವ್ಯರ್ಥವಾಗುವಂತಾಗಿದೆ!

ಇದಕ್ಕೆ ಸಾಕ್ಷಿ ಎಂಬಂತೆ, 1 ನೇ ವಾರ್ಡ್ ಸೋಮಿನಕೊಪ್ಪದ ಕೆ.ಹೆಚ್.ಬಿ ಪ್ರೆಸ್ ಕಾಲೋನಿ ಬಳಿ ಹಳೇ ಬಸ್ ನಿಲ್ದಾಣವನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ನವೀಕರಣಗೊಳಿಸಲಾಗಿತ್ತು. ಆದರೆ ಒಂದೂವರೆ ವರ್ಷವಾದರೂ ಇಲ್ಲಿಯವರೆಗೂ ಬಸ್ ನಿಲ್ದಾಣಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ.
ಇದರಿಂದ ಬಸ್ ನಿಲ್ದಾಣದ ಒಳಭಾಗದಲ್ಲಿ ಅಳವಡಿಸಿದ್ದ ವಿದ್ಯುತ್ ಕೇಬಲ್, ಮೀಟರ್ ಬಾಕ್ಸ್, ಸ್ವಿಚ್ ಬೋರ್ಡ್, ವೈಯರ್ ಗಳು ಕಿತ್ತು ಹೋಗಿವೆ. ಲೈಟ್ ಗಳು ಧೂಳು ಹಿಡಿಯುತ್ತಿವೆ ಎಂದು ನಾಗರೀಕರು ದೂರಿದ್ದಾರೆ.

‘ಈ ಹಿಂದೆ ಸ್ಮಾರ್ಟ್ ಸಿಟಿಯ ಸಂಬಂಧಿಸಿದ ಎಂಜಿನಿಯರ್ ಗಳ ಗಮನಕ್ಕೆ ಅವ್ಯವಸ್ಥೆ ತರಲಾಗಿತ್ತು. ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಮನವಿ ಮಾಡಲಾಗಿತ್ತು. ಆದರೆ ಯಾವುದೇ ಕ್ರಮಕೈಗೊಂಡಿಲ್ಲ. ದಿವ್ಯ ನಿರ್ಲಕ್ಷ್ಯ ಧೋರಣೆಯಿಂದ ಸ್ವಿಚ್ ಬೋರ್ಡ್, ವೈಯರ್ ಗಳು ಕಿತ್ತು ಹೋಗುತ್ತಿವೆ. ಹೇಳುವವರು ಕೇಳುವವರು ಯಾರು ಇಲ್ಲದಂತಾಗಿದೆ’ ಎಂದು ನಾಗರೀಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಇನ್ನಾದರೂ ಸ್ಮಾರ್ಟ್ ಸಿಟಿ ಆಡಳಿತ ಎಚ್ಚೆತ್ತುಕೊಳ್ಳಬೇಕು. ಅರ್ಧಂಬರ್ಧ ಕಾಮಗಾರಿ ನಡೆಸಿರುವ ಬಸ್ ನಿಲ್ದಾಣಗಳ ಅವ್ಯವಸ್ಥೆ ಸರಿಪಡಿಸಲು ಮುಂದಾಗಬೇಕು ಎಂದು ನಾಗರೀಕರು ಆಗ್ರಹಿಸುತ್ತಾರೆ.