ಸಹಕಾರಿ ಕ್ಷೇತ್ರ ರಾಜಕೀಯದಿಂದ ಹೊರತಾಗಿರಬೇಕು : ಶಾಸಕಿ ಶಾರದಾ ಪೂರ್ಯಾನಾಯ್ಕ್

ಹೊಳೆಹೊನ್ನೂರು (ಭದ್ರಾವತಿ) : ‘ಯಾವುದೇ ಸಹಕಾರಿ ಕ್ಷೇತ್ರ ರಾಜಕೀಯದಿಂದ ದೂರವಿರಬೇಕು’ ಎಂದು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ ಶಾರದಾ ಪೂರ್ಯಾನಾಯ್ಕ್ ಹೇಳಿದ್ದಾರೆ.

ಹೊಳೆಹೊನ್ನೂರು ಸಮೀಪದ ಅರಹತೊಳಲು ಗ್ರಾಮದಲ್ಲಿ ನಡೆದ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಗೋದಾಮು ಕಟ್ಟಡದ ಉದ್ಘಾಟನೆ ನೆರವೇರಿಸಿ ಅವರ ಮಾತನಾಡಿದರು.

ರೈತರೇ ರೈತರಿಂದ ರೈತರಿಗೋಸ್ಕರ ಸ್ಥಾಪಿಸಿದ ಸಂಸ್ಥೆಯೇ ಸಹಕಾರ ಸಂಘ. ಇಲ್ಲಿ ಯಾವುದೇ ಜಾತಿ, ಧರ್ಮ ಮತ್ತು ರಾಜಕೀಯ ಇರುವುದಿಲ್ಲ. ರೈತರ ಉದ್ದಾರವೇ ಸಂಸ್ಥೆಯ ಉದ್ದೇಶವಾಗಿರುತ್ತದೆ. ರೈತರು ಈ ಸಂಘವನ್ನು ಸ್ಥಳೀಯ ಬ್ಯಾಂಕ್ ಎಂದುಕೊಂಡು ವ್ಯವಹರಿಸಬೇಕು. ಹಣವನ್ನು ದೂರದ ವಾಣಿಜ್ಯ ಬ್ಯಾಂಕ್ ಗಳಲ್ಲಿ ಇರಿಸುವ ಬದಲು, ಸಹಕಾರಿ ಸಂಘದಲ್ಲಿಯೇ ಇಟ್ಟು, ಅವಶ್ಯಕತೆ ಇದ್ದಾಗ ತೆಗೆದುಕೊಳ್ಳಬೇಕು. ಆಗ ಸಂಘವು ಏಳಿಗೆಯ ಪಥದಲ್ಲಿ ಸಾಗುವುದು ಎಂದರು.

ಸಹಕಾರಿ ಕ್ಷೇತ್ರ ರಾಜಕೀಯದಿಂದ ಹೊರತಾಗಿರಬೇಕು : ಶಾಸಕಿ ಶಾರದಾ ಪೂರ್ಯಾನಾಯ್ಕ್

ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಪ್ರಭಾರ ಅಧ್ಯಕ್ಷ ಹೆಚ್.ಎಲ್.ಷಡಾಕ್ಷರಿ ಮಾತನಾಡಿ, ಈ ಸಹಕಾರಿ ಸಂಘಕ್ಕೆ ಇದುವರೆಗೂ ಒಂದು ಸುಸಜ್ಜಿತ ಕಟ್ಟಡ ಇರಲಿಲ್ಲ. ಆದರೆ ನಬಾರ್ಡ್‌ನ ಸಹಕಾರದಿಂದ ಉತ್ತಮವಾದ ಗೋದಾಮು ಕಟ್ಟಡ ನಿರ್ಮಾಣವಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಆಡಳಿತ ಕಛೇರಿ, ಸ್ಟ್ರಾಂಗ್ ರೂಂ ಅನ್ನು ನಿರ್ಮಿಸಿಕೊಂಡು ಬಂಗಾರ ಅಡಮಾನ ಸಾಲ, ಅಡಿಕೆ ಅಡಮಾನ ಸಾಲಗಳನ್ನು ನೀಡಬೇಕು. 

ಜೊತೆಗೆ ಹೆಚ್ಚಿನ ಪ್ರಮಾಣದ ಖಾಯಂ ಠೇವಣಿ ಇಡುವಂತೆ ರೈತರ ಮನವೊಲಿಸಬೇಕು. ಆಗ ಕೇಂದ್ರ ಬ್ಯಾಂಕ್‌ನಿಂದ ಹಣದ ಸಹಾಯ ಪಡೆದು ರೈತರಿಗೆ ಹೆಚ್ಚಿನ ಸಾಲ ನೀಡಬಹುದು. ಇದರಿಂದ ವಸೂಲಾಗುವ ಬಡ್ಡಿಯಿಂದ ಸಂಘವು ಅಭಿವೃದ್ಧಿ ಹೊಂದಿ ಲಾಭದಾಯಕವಾಗುವುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅರಹತೊಳಲು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಿ.ಪಿ.ಚಂದ್ರಶೇಖರ್ ಮಾತನಾಡಿ, ಗ್ರಾಮದಲ್ಲಿ ಸಹಕಾರ ಸಂಘ ಆರಂಭವಾಗಿ ಆರು ವರ್ಷ ಕಳೆದಿವೆ. ಶುಭ ಸೂಚನೆ ಎಂಬಂತೆ ಮೊದಲ ಬಾರಿಗೆ ಸಂಘವು ರೂ. 5.71 ಲಕ್ಷ ಲಾಭವನ್ನು ಗಳಿಸಿದೆ. ರೂ 5.87 ಕೋಟಿ ಸಾಲವನ್ನು ರೈತರಿಗೆ ನೀಡಿದೆ. ಮುಂದಿನ ದಿನಗಳಲ್ಲಿ ಸಂಘವು ಇನ್ನಷ್ಟು ಲಾಭ ಗಳಿಸಲು ಅಗತ್ಯವಿರುವ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾ್ಉವುದು ಎಂದರು.

ಸಮಾರಂಭದಲ್ಲಿ ಸಂಸ್ಥಾಪಕ ಅಧ್ಯಕ್ಷ ಜಿ.ಎಸ್.ಮಲ್ಲಿಕಾರ್ಜುನ ಪಟೇಲ್, ತಾಪಂ ಮಾಜಿ ಅಧ್ಯಕ್ಷೆ ಆಶಾ ಶ್ರೀಧರ್, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ವಾಸುದೇವ್, ನಬಾರ್ಡ‌‌ನ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಪಿ.ಶರತ್ ಗೌಡ, ಹೊಳೆಹೊನ್ನೂರು ಡಿಸಿಸಿ ಬ್ಯಾಂಕ್‌ನ ಎಂ.ಪಿ.ಸುರೇಶ್, ಗ್ರಾಪಂ ಉಪಾಧ್ಯಕ್ಷ ಎನ್.ಟಿ.ಸಂಗನಾಥ್, ಸಂಘದ ಉಪಾಧ್ಯಕ್ಷ ಕೆ.ಯತೀಶ್ವರಾಚಾರ್, ನಿರ್ದೇಶಕರಾದ ಎಲ್.ಎಸ್.ರವಿಕುಮಾರ್, ಎ.ಆರ್.ಬಸವರಾಜಪ್ಪ, ಎ.ಎಂ.ಮಲ್ಲಿಕಾರ್ಜುನ್, ಜೆ.ಪಿ.ಶೇಖರಪ್ಪ, ನಾಗೇಂದ್ರಯ್ಯ, ಡಿ.ಹೆಚ್.ಪಾಲಾಕ್ಷಪ್ಪ, ಸಿದ್ದಪ್ಪ, ಯಶೋಧ, ಜಯಲಕ್ಷ್ಮಿ, ರೇಖಾ, ಹಿರಿಯರಾದ ಚಂದ್ರಪ್ಪ ಬಂಡೇರ, ಎಸ್.ಪಿ.ಜಯದೇವಪ್ಪ ಸೇರಿದಂತೆ ಮೊದಲಾದವರಿದ್ದರು.

ಶಿವಮೊಗ್ಗ – ಹಾಳಾಗುತ್ತಿರುವ ಬಸ್ ನಿಲ್ದಾಣ ಕಾಮಗಾರಿ : ಎಚ್ಚೆತ್ತುಕೊಳ್ಳುವುದೆ ಸ್ಮಾರ್ಟ್ ಸಿಟಿ ಆಡಳಿತ? Previous post ಶಿವಮೊಗ್ಗ – ಹಾಳಾಗುತ್ತಿರುವ ಬಸ್ ನಿಲ್ದಾಣ ಕಾಮಗಾರಿ : ಎಚ್ಚೆತ್ತುಕೊಳ್ಳುವುದೆ ಸ್ಮಾರ್ಟ್ ಸಿಟಿ ಆಡಳಿತ?
ಶಿವಮೊಗ್ಗ : ಕೊನೆಗೂ ಬೋನಿಗೆ ಬಿದ್ದ ಗಂಡು ಚಿರತೆ! Next post ಶಿವಮೊಗ್ಗ : ಕೊನೆಗೂ ಬೋನಿಗೆ ಬಿದ್ದ ಗಂಡು ಚಿರತೆ..!