ಸರ್ಕಾರಿ ಮೆಗ್ಗಾನ್ ಆಸ್ಪತ್ರೆ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಹಾಸಿಗೆ - ಸಿಬ್ಬಂದಿಗಳ ಕೊರತೆ : ಗಮನಹರಿಸುವುದೆ ರಾಜ್ಯ ಸರ್ಕಾರ?!

ಸರ್ಕಾರಿ ಮೆಗ್ಗಾನ್ ಆಸ್ಪತ್ರೆ ‘ನವಜಾತ ಶಿಶುಗಳ ತೀವ್ರ ನಿಗಾ ಘಟಕ’ದಲ್ಲಿ ಹಾಸಿಗೆ -ಸಿಬ್ಬಂದಿಗಳ ಕೊರತೆ : ಗಮನಹರಿಸುವುದೆ ರಾಜ್ಯ ಸರ್ಕಾರ?!

ವರದಿ : ಬಿ. ರೇಣುಕೇಶ್

ಶಿವಮೊಗ್ಗ, ಆ. 22: ಮಧ್ಯ ಕರ್ನಾಟಕದ ಪ್ರಮುಖ ಸರ್ಕಾರಿ ಆಸ್ಪತ್ರೆಯಾಗಿ ಗುರುತಿಸಿಕೊಂಡಿರುವ, ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆ ಮಕ್ಕಳ ವಿಭಾಗದ, ನವಜಾತ ಶಿಶುಗಳ ತೀವ್ರ ನಿಗಾ ಘಟಕ (ಎನ್.ಐ.ಸಿ.ಯು) ದಲ್ಲಿ ಹಾಸಿಗೆ ಹಾಗೂ ಸಿಬ್ಬಂದಿಗಳ ತೀವ್ರ ಕೊರತೆ ಎದುರಾಗಿದೆ!

ಪ್ರಸ್ತುತ ‘ಎನ್ಐಸಿಯು’ ವಿಭಾಗದಲ್ಲಿ 30 ಬೆಡ್ ಗಳ ವ್ಯವಸ್ಥೆಯಿದೆ. ಸದರಿ ವಿಭಾಗದಲ್ಲಿ ತಜ್ಞ ವೈದ್ಯರಿದ್ದು ಉತ್ತಮ ಚಿಕಿತ್ಸೆ ಲಭ್ಯವಾಗುತ್ತಿದೆ. ಆದರೆ ಕೇಂದ್ರಕ್ಕೆ ದಾಖಲಾಗುವ ನವಜಾತ ಶಿಶುಗಳ ಸಂಖ್ಯೆ ಹೆಚ್ಚಾಗುತ್ತಿದೆ. ನಿಗದಿಗಿಂತ ಹೆಚ್ಚಿನ ನವಜಾತ ಶಿಶುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. 60 ಸಿಬ್ಬಂದಿಗಳಿರಬೇಕಾದ ಸದರಿ ವಿಭಾಗದಲ್ಲಿ, ಕೇವಲ 30 ಶುಶ್ರೂಷಕರಿದ್ದಾರೆ.

ದಿನದಿಂದ ದಿನಕ್ಕೆ ಈ ವಿಭಾಗಕ್ಕೆ ಆಗಮಿಸುವ ನವಜಾತ ಶಿಶುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಹಾಸಿಗೆ ಹಾಗೂ ಸಿಬ್ಬಂದಿಗಳ ಕೊರತೆಯಿಂದ, ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸ್ಸು ಮಾಡಲಾಗುತ್ತಿದೆ.

ಆದರೆ ಖಾಸಗಿ ಆಸ್ಪತ್ರೆಯಲ್ಲಿ ‘ಎನ್ಐಸಿಯು’ ವಿಭಾಗದಲ್ಲಿ, ನವಜಾತ ಶಿಶು ದಾಖಲಿಸಿ ಚಿಕಿತ್ಸೆ ಕೊಡಿಸಲು ಪ್ರತಿದಿನಕ್ಕೆ 25 ರಿಂದ 30 ಸಾವಿರ ರೂ. ವೆಚ್ಚವಾಗುತ್ತದೆ. ಇದು ಬಡ, ಮಧ್ಯಮ ವರ್ಗದ ಪೋಷಕರಿಗೆ ಹೊರೆಯಾಗಿದೆ. ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಂಪೂರ್ಣ ಉಚಿತವಾಗಿ ಚಿಕಿತ್ಸೆ ಲಭ್ಯವಾಗುತ್ತದೆ.

ಶಿವಮೊಗ್ಗ ಜಿಲ್ಲೆ ಮಾತ್ರವಲ್ಲದೆ ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ಹಾವೇರಿ, ಕಾರವಾರ ಜಿಲ್ಲೆಗಳಿಂದಲೂ ‘ಎನ್ಐಸಿಯು’ ವಿಭಾಗದಲ್ಲಿ ದಾಖಲಿಸಲು ನವಜಾತ ಶಿಶುಗಳನ್ನು ಕರೆತರಲಾಗುತ್ತಿದೆ. ಇದರಿಂದ ಈ ವಿಭಾಗದ ಮೇಲೆ ಹೆಚ್ಚಿನ ಒತ್ತಡ ಬೀಳುವಂತಾಗಿದೆ. ಆದರೆ ಬೆಡ್ ಹಾಗೂ ಸಿಬ್ಬಂದಿಗಳ ತೀವ್ರ ಕೊರತೆಯಿರುವುದು ಬಡ – ಮಧ್ಯಮ ವರ್ಗದವರಿಗೆ ತೀವ್ರ ತೊಂದರೆ ಉಂಟಾಗುವಂತೆ ಮಾಡಿದೆ.

ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಆರೋಗ್ಯ ಸಚಿವರು ಹಾಗೂ ಶಿವಮೊಗ್ಗ ಜಿಲ್ಲೆಯಜನಪ್ರತಿನಿಧಿಗಳು ಗಮನಹರಿಸಬೇಕಾಗಿದೆ. ಬಡ, ಮಧ್ಯಮ ವರ್ಗದವರಿಗೆ ಅನುಕೂಲ ಕಲ್ಪಿಸಿಕೊಡಲು ಕಾಲಮಿತಿಯೊಳಗೆ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ಎಲ್ಲ ರೀತಿಯ ಅಗತ್ಯ ಸೌಲಭ್ಯ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಆದ್ಯ ಗಮನಹರಿಸಬೇಕಾಗಿದೆ.

ಅಗತ್ಯವಿದೆ ಪ್ರತ್ಯೇಕ ಜಿಲ್ಲಾ ಸರ್ಕಾರಿ ಆಸ್ಪತ್ರೆ

*** ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಯಾದ ನಂತರ, ಶಿವಮೊಗ್ಗ ಜಿಲ್ಲಾ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯು ಮೆಡಿಕಲ್ ಕಾಲೇಜು ಬೋಧನಾ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿದೆ. ಸುತ್ತಮುತ್ತಲಿನ ಐದಾರು ಜಿಲ್ಲೆಗಳಿಂದ ರೋಗಿಗಳು ಇಲ್ಲಿನ ಆಸ್ಪತ್ರೆಗೆ ಆಗಮಿಸುತ್ತಿದ್ದಾರೆ. ಬಡ, ಮಧ್ಯಮ ವರ್ಗದ ರೋಗಿಗಳಿಗೆ ಅನುಕೂಲ ಕಲ್ಪಿಸಿಕೊಡುವ ಉದ್ದೇಶದಿಂದ ಶಿವಮೊಗ್ಗ ನಗರದಲ್ಲಿ ಪ್ರತ್ಯೇಕ ಜಿಲ್ಲಾ ಸರ್ಕಾರಿ ಆಸ್ಪತ್ರೆ ಸ್ಥಾಪನೆಯ ತುರ್ತು ಅಗತ್ಯವಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸೂಕ್ತ ಕ್ರಮಕೈಗೊಳ್ಳಬೇಕಾಗಿದೆ ಎಂಬುವುದು ಪ್ರಜ್ಞಾವಂತ ನಾಗರೀಕರ ಆಗ್ರಹವಾಗಿದೆ.

ಮಧ್ಯ ಕರ್ನಾಟಕದ ಪ್ರಮುಖ ಸರ್ಕಾರಿ ಆಸ್ಪತ್ರೆ

*** ಶಿವಮೊಗ್ಗ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯು ಮಧ್ಯ ಕರ್ನಾಟಕ ಭಾಗದ ಪ್ರಮುಖ ಸರ್ಕಾರಿ ಆಸ್ಪತ್ರೆಯಾಗಿ ಹೊರಹೊಮ್ಮಿದೆ. ಶಿವಮೊಗ್ಗ ಜಿಲ್ಲೆ ಮಾತ್ರವಲ್ಲದೆ ಚಿಕ್ಕಮಗಳೂರು, ಹಾಸನ, ದಾವಣಗೆರೆ, ಹಾವೇರಿ, ಚಿತ್ರದುರ್ಗ, ಕಾರವಾರ ಜಿಲ್ಲೆಗಳಿಂದಲೂ ಚಿಕಿತ್ಸೆಗಾಗಿ ರೋಗಿಗಳು ಆಸ್ಪತ್ರೆಗೆ ಆಗಮಿಸುತ್ತಾರೆ. ರೋಗಿಗಳ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಕಾರಣದಿಂದ ರಾಜ್ಯ ಸರ್ಕಾರವು ಶಿವಮೊಗ್ಗ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯನ್ನು ಮಧ್ಯ ಕರ್ನಾಟಕ ಭಾಗದ ಪ್ರಮುಖ ಸರ್ಕಾರಿ ಆಸ್ಪತ್ರೆಯಾಗಿ ಅಭಿವೃದ್ದಿಗೊಳಿಸಿ, ಸೌಲಭ್ಯ ಕಲ್ಪಿಸಬೇಕು. ಈ ಮೂಲಕ ರೋಗಿಗಳಿಗೆ ನೆರವಾಗಬೇಕಾಗಿದೆ.

Previous post ರಾಜ್ಯದಲ್ಲಿ ಫ್ಯಾಕ್ಟ್ ಚೆಕ್ ಘಟಕ ರಚನೆಗೆ ಸಿಎಂ ಸಮ್ಮತಿ
ವಾಹನ ಸವಾರರೇ ‘ಸ್ಮಾರ್ಟ್’ ಕ್ಯಾಮರಾಗಳಿವೆ ಎಚ್ಚರ…! ಆ. 28 ರಿಂದ ಶಿವಮೊಗ್ಗದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದರೆ ಮನೆ ಬಾಗಿಲಿಗೆ ಬರಲಿದೆ ದಂಡದ ರಶೀದಿ!! Next post ವಾಹನ ಸವಾರರೇ ‘ಸ್ಮಾರ್ಟ್’ ಕ್ಯಾಮರಾಗಳಿವೆ ಎಚ್ಚರ…! ಆ. 28 ರಿಂದ ಶಿವಮೊಗ್ಗದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದರೆ ದಂಡ ಗ್ಯಾರೆಂಟಿ..!