
ವಾಹನ ಸವಾರರೇ ‘ಸ್ಮಾರ್ಟ್’ ಕ್ಯಾಮರಾಗಳಿವೆ ಎಚ್ಚರ…! ಆ. 28 ರಿಂದ ಶಿವಮೊಗ್ಗದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದರೆ ದಂಡ ಗ್ಯಾರೆಂಟಿ..!
ವರದಿ : ಬಿ. ರೇಣುಕೇಶ್
ಶಿವಮೊಗ್ಗ, ಆ. 22: ಶಿವಮೊಗ್ಗದ ಪ್ರಮುಖ ರಸ್ತೆ, ಸರ್ಕಲ್ ಗಳಲ್ಲಿ ಟ್ರಾಫಿಕ್ ಪೊಲೀಸರಿಲ್ಲವೆಂದು ನಿಯಮ ಉಲ್ಲಂಘಿಸಿ ವಾಹನ ಚಲಾಯಿಸುವ ಚಾಲಕರೇ ಎಚ್ಚರ..! ಆಗಸ್ಟ್ 28 ರಿಂದ ಸಂಚಾರಿ ನಿಯಮ ಉಲ್ಲಂಘನೆ ಮಾಡಿದರೆ, ನಿಮ್ಮ ಮೊಬೈಲ್ ಫೋನ್ ಗೆ ಅಥವಾ ನಿಮ್ಮ ಮನೆ ಬಾಗಿಲಿಗೆ ದಂಡದ ಚಲನ್ ಬರಲಿದೆ…!!

ಹೌದು. ಸಂಚಾರಿ ನಿಯಮಗಳ ಉಲ್ಲಂಘನೆ ಪತ್ತೆಗಾಗಿ ಹಾಗೂ ಸುಗಮ ವಾಹನ ಸಂಚಾರಕ್ಕಾಗಿ ಶಿವಮೊಗ್ಗದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಇಂಟಿಗ್ರೇಟೆಡ್ ಟ್ರಾಫಿಕ್ ಮ್ಯಾನೇಜ್’ಮೆಂಟ್ ಸಿಸ್ಟಮ್ (ಐಟಿಎಂಎಸ್) ವ್ಯವಸ್ಥೆಯಡಿ ಕೋಟ್ಯಾಂತರ ರೂ. ವೆಚ್ಚದಲ್ಲಿ ಅತ್ಯಾಧುನಿಕ ಸಿ ಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.
ಸಿಗ್ನಲ್ ಜಂಪ್, ಒನ್ ವೇ ನಿಯಮ ಉಲ್ಲಂಘನೆ, ಹೆಲ್ಮೆಟ್ ಇಲ್ಲದೆ ಬೈಕ್ ಸವಾರಿ, ತ್ರಿಬಲ್ ರೈಂಡಿಂಗ್, ಮಿತಿ ಮೀರಿದ ವೇಗದಲ್ಲಿ ವಾಹನ ಚಾಲನೆ, ಚಾಲನೆ ವೇಳೆ ಮೊಬೈಲ್ ಪೋನ್ ಬಳಕೆ, ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲುಗಡೆ ಮಾಡಿದರೆ ತಕ್ಷಣವೇ ಕ್ಯಾಮರಾಗಳಲ್ಲಿ ಸದರಿ ವಾಹನಗಳ ನೊಂದಣಿ ಫಲಕದ ಫೋಟೋ-ವೀಡಿಯೋ ಆಟೋಮ್ಯಾಟಿಕ್ ಆಗಿ ಸೆರೆಯಾಗಿ ಕಮಾಂಡ್ ಸೆಂಟರ್ ಗೆ ರವಾನೆಯಾಗಲಿದೆ.

ನಂತರ ವಾಹನಗಳ ನೊಂದಣಿ ಸಂಖ್ಯೆ ಆಧಾರದ ಮೇಲೆ, ಇಂಟಿಗ್ರೇಟೆಡ್ ಸಾಫ್ಟ್’ವೇರ್ ಸಹಾಯದಿಂದ ವಾಹನ ಮಾಲೀಕರ ಮೊಬೈಲ್ ಸಂಖ್ಯೆಗೆ ಮೆಸೇಜ್ ರವಾನೆಯಾಗಲಿದೆ. ಮೆಸೇಜ್ ತಲುಪದಿದ್ದರೆ ಅವರ ಮನೆಗೆ ಪೋಸ್ಟ್ ಮೂಲಕ ಸಂಚಾರಿ ನಿಯಮ ಉಲ್ಲಂಘನೆ ವಿವರ ಹಾಗೂ ಪಾವತಿಸಬೇಕಾದ ದಂಡದ ಮೊತ್ತದ ಚಲನ್ ತಲುಪಲಿದೆ.
ಈ ಕುರಿತಂತೆ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿನೂತನ ವ್ಯವಸ್ಥೆ ಕುರಿತಂತೆ ಮಾಹಿತಿ ನೀಡಿದ್ದಾರೆ. ‘ಸ್ಮಾರ್ಟ್ ಸಿಟಿಯ ಇಂಟಿಗ್ರೇಟೆಡ್ ಟ್ರಾಫಿಕ್ ಮ್ಯಾನೇಜ್’ಮೆಂಟ್ ಸಿಸ್ಟಮ್ (ಐಟಿಎಂಎಸ್) ಅಡಿ ಆ. 28 ರಿಂದ ನೂತನ ವ್ಯವಸ್ಥೆ ಅನುಷ್ಠಾನಕ್ಕೆ ತರಲಾಗುತ್ತಿದೆ’ ಎಂದು ಮಾಹಿತಿ ನೀಡಿದ್ದಾರೆ.
ಕ್ಯಾಮರಾಗಳ ವಿವರ – ಕಾರ್ಯವಿಧಾನ
ಶಿವಮೊಗ್ಗದ ತಲಾ 13 ವೃತ್ತ ಹಾಗೂ ನಗರ ಪ್ರವೇಶದ ಪ್ರಮುಖ 13 ರಸ್ತೆಗಳಲ್ಲಿ ಅತ್ಯಾಧುನಿಕ ಸಿಸಿ ಕ್ಯಾಮರಾಗಳ ಅಳವಡಿಸಲಾಗಿದೆ. ಇದರಲ್ಲಿ ಆರ್.ಎಲ್.ವಿ.ಡಿ ಕ್ಯಾಮರಾಗಳು, ಸಿಗ್ನಲ್ ಜಂಪ್ ಮಾಡಿದ ವಾಹನಗಳ ಫೋಟೋ-ವೀಡಿಯೋ ಸಂಗ್ರಹಿಸುತ್ತವೆ. ಹಾಗೆಯೇ ಎಸ್.ವಿ.ಡಿ ಕ್ಯಾಮರಾಗಳ ಮಿತಿಮೀರಿದ ವೇಗದಲ್ಲಿ ಸಂಚರಿಸುವ ವಾಹನಗಳನ್ನ, ಪಿಟಿಝಡ್ – ಎ.ಎನ್.ಪಿ.ಆರ್, ಎ.ಎಸ್.ವಿ.ಡಿ ಕ್ಯಾಮರಾಗಳು ಹೆಲ್ಮೆಟ್ ರಹಿತ, ತ್ರಿಬಲ್ ರೈಡಿಂಗ್, ಮೊಬೈಲ್ ರೈಡಿಂಗ್, ಒನ್ ವೇ, ಪ್ರವೇಶ ನಿಷಿದ್ಧ, ನೋ ಪಾರ್ಕಿಂಗ್ ಉಲ್ಲಂಘನೆ ಮಾಡುವ ವಾಹನಗಳ ಫೋಟೋ – ವೀಡಿಯೋ ಸೆರೆ ಹಿಡಿಯುತ್ತವೆ.
ಕ್ಯಾಮರಾಗಳಲ್ಲಿ ಸೆರೆಯಾದ ಫೋಟೋ – ವೀಡಿಯೋಗಳು ತತ್’ಕ್ಷಣವೇ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್ ಗೆ ರವಾನೆಯಾಗುತ್ತವೆ. ಕಮಾಂಡ್ ಸೆಂಟರ್ ನಲ್ಲಿ ಐಟಿಎಂಸ್ ತಂತ್ರಾಶದ ಸಹಾಯದಿಂದ ಸಂಚಾರ ನಿಯಮ ಉಲ್ಲಂಘಿಸಿದ ವಾಹನಗಳ ಮಾಹಿತಿ ಪರಿಶೀಲಿಸಲಾಗುತ್ತದೆ. ಸಂಚಾರ ನಿಯಮ ಉಲ್ಲಂಘನೆ ನೋಟೀಸ್ ಸಿದ್ದಪಡಿಸಿ ವಾಹನ ಮಾಲೀಕರ ಮೊಬೈಲ್ ಸಂಖ್ಯೆಗೆ ಎಸ್.ಎಂ.ಎಸ್ ಅಥವಾ ವಾಹನ ಮಾಲೀಕರ ವಿಳಾಸಕ್ಕೆ ಅಂಚೆ ಮೂಲಕ ನೋಟೀಸ್ ರವಾನೆಯಾಗಲಿದೆ.
ದಂಡ ಪಾವತಿ ಮಾಡುವ ವಿಧಾನ

ಮೊಬೈಲ್ ಅಥವಾ ಅಂಚೆ ಮೂಲಕ ಟ್ರಾಫಿಕ್ ನಿಯಮ ಉಲ್ಲಂಘನೆಯ ನೋಟೀಸ್ ಬಂದ ವಾಹನ ಚಾಲಕರು, ನಮೂದಿತ ದಂಡದ ಮೊತ್ತವನ್ನು ಸಮೀಪದ ಸಂಚಾರಿ ಪೊಲೀಸ್ ಠಾಣೆ ಅಥವಾ ಕರ್ತವ್ಯನಿರತ ಸಂಚಾರಿ ಪೊಲೀಸ್ ಅಧಿಕಾರಿಗಳ ಬಳಿ ಸ್ಪಾಟ್ ಫೈನ್ ಡಿವೈಎಸ್ ನಲ್ಲಿ ಪರಿಶೀಲಿಸಿ ದಂಡ ಪಾವತಿಸಬಹುದಾಗಿದೆ. ಇಲ್ಲಿಯವರೆಗೂ ಹಳೇಯ ಟ್ರಾಫಿಕ್ ಆಟೋಮೇಷನ್ ತಂತ್ರಾಂಶದ ಮೂಲಕ ನೋಟೀಸ್ ಸೃಜಿಸಿ ವಾಹನ ಮಾಲೀಕರ ವಿಳಾಸಕ್ಕೆ ಕಳುಹಿಸಲಾಗುತ್ತಿತ್ತು. ಆ. 28 ರ ನಂತರ ಸ್ಮಾರ್ಟ್ ಸಿಟಿ ಐಟಿಎಂಎಸ್ ತಂತ್ರಾಂಶದ ಸಹಾಯದಿಂದ ನೋಟೀಸ್ ಗಳು ರವಾನೆಯಾಗಲಿದೆ. ವಾಹನ ಸವಾರರ ಸಂಚಾರಿ ನಿಯಮಗಳ ಕಡ್ಡಾಯ ಪಾಲನೆ ಮಾಡಬೇಕು ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಅತ್ಯಾಧುನಿಕ ಕ್ಯಾಮರಾ ಅಳವಡಿಕೆಯಾಗಿರುವ ವೃತ್ತ, ರಸ್ತೆಗಳ ವಿವರ
ವೃತ್ತಗಳ ವಿವರ : ಮಹಾವೀರ ಸರ್ಕಲ್, ಶಿವಮೂರ್ತಿ ಸರ್ಕಲ್, ಕೆಇಬಿ ಸರ್ಕಲ್, ಸಂದೇಶ್ ಮೋಟಾರ್ ಸರ್ಕಲ್, ಶಂಕರಮಠ ಸರ್ಕಲ್, ಕರ್ನಾಟಕ ಸಂಘ ಸರ್ಕಲ್, ಐಬಿ ಸರ್ಕಲ್, ಆಯನೂರು ಗೇಟ್, ಜೈಲ್ ಸರ್ಕಲ್, ಲಕ್ಷ್ಮೀ ಟಾಕೀಸ್ ಸರ್ಕಲ್, ಪೊಲೀಸ್ ಚೌಕಿ, ಆಲ್ಕೋಳ ಸರ್ಕಲ್, ಗೋಪಿ ಸರ್ಕಲ್,.

ನಗರ ಪ್ರವೇಶ – ನಿರ್ಗಮನ ರಸ್ತೆಗಳ ವಿವರ : ಮಲವಗೊಪ್ಪ ಬಿ.ಹೆಚ್.ರಸ್ತೆ, ಕೆವಿಎಸ್ ಸಮೀಪ ಎನ್.ಆರ್.ಪುರ ರಸ್ತೆ, ಊರುಗಡೂರು ಜಂಕ್ಷನ್ – 1, ಊರೂಗಡೂರು ಜಂಕ್ಷನ್ – 2, ಹೊಂಡಾ ಶೋ ರೂಂ ಸಮೀಪದ ಬೈಪಾಸ್ ರಸ್ತೆ, ಎನ್.ಟಿ.ರಸ್ತೆ, ಶರವಾತಿ ಡೆಂಟಲ್ ಕಾಲೇಜ ಸಮೀಪದ ರಸ್ತೆ, ಬುದ್ದನಗರ ಕ್ರಾಸ್, ತುಂಗಾನಗರ ಪೊಲೀಸ್ ಸ್ಟೇಷನ್, ಸೋಮಿನಕೊಪ್ಪ, ಕೃಷಿ ಕಾಲೇಜು ಸಮೀಪದ ಸವಳಂಗ ರಸ್ತೆ, ತ್ಯಾವರೆಚಟ್ನಳ್ಳಿ ರಸ್ತೆ, ಗುರುಪುರ ರಸ್ತೆ,.