
‘ಫೆ.11 ರೊಳಗೆ ಟ್ರಾಫಿಕ್ ಫೈನ್ ಪಾವತಿಸಿ, ಶೇ. 50 ರಷ್ಟು ರಿಯಾಯ್ತಿ ಪಡೆಯಿರಿ..!’
ಶಿವಮೊಗ್ಗ, ಫೆ. 3: ಈ ಹಿಂದೆ ಸಂಚಾರಿ ನಿಯಮಗಳ ಉಲ್ಲಂಘಿಸಿ ದಂಡ ಕಟ್ಟದೆ ಬಾಕಿ ಉಳಿಸಿಕೊಂಡಿರುವವರು, ಫೆಬ್ರವರಿ 11 ರೊಳಗೆ ದಂಡ ಪಾವತಿಸಿದರೆ ಶೇ. 50 ರಷ್ಟು ರಿಯಾಯ್ತಿ ಕಲ್ಪಿಸುವಂತೆ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರ ಮನವಿ ಮೇರೆಗೆ, ರಾಜ್ಯ ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿಗಳು ಶೇ. 50 ರಷ್ಟು ರಿಯಾಯ್ತಿ ನೀಡಿ ಆದೇಶ ಹೊರಡಿಸಿದ್ದಾರೆ.
ಅದರಂತೆ ಶಿವಮೊಗ್ಗ ನಗರದಲ್ಲಿಯೂ ಆದೇಶ ಜಾರಿಗೆ ಪೊಲೀಸ್ ಇಲಾಖೆ ಕ್ರಮಕೈಗೊಂಡಿದೆ. ಈ ಕುರಿತಂತೆ ಶುಕ್ರವಾರ ಪ್ರಕಟಣೆ ಹೊರಡಿಸಿದೆ.
ದಂಡ ಪಾವತಿಸಲು ಇಚ್ಚಿಸುವವರು ಫೆ. 11 ರೊಳಗೆ ಸಂಚಾರಿ ಪೊಲೀಸ್ ಠಾಣೆಗಳಿಗೆ ತೆರಳಿ ಅಥವಾ ಸಂಚಾರಿ ಠಾಣೆಗಳ ಕರ್ತವ್ಯನಿರತ ಸಿಪಿಐ, ಪಿಎಸ್ಐ, ಎಎಸ್ಐ ಗಳ ಬಳಿ ದಂಡ ಪಾವತಿಸಿ ಸ್ಥಳದಲ್ಲಿಯೇ ರಶೀದಿ ಪಡೆಯಬಹುದಾಗಿದೆ.
ಅಂತರ್ಜಾಲ ತಾಣ ಕರ್ನಾಟಕ್ ಒನ್ ವೆಬ್ ಸೈಟ್ ನಲ್ಲಿ ವಾಹನದ ನೊಂದಣಿ ಸಂಖ್ಯೆ / ನೋಟೀಸ್ ನಂಬರ್ ನಮೂದಿಸಿ ವಿವರ ಪಡೆದು ಬಾಕಿ ದಂಡ ಪಾವತಿಸಬಹುದಾಗಿದೆ. ಜೊತೆಗೆ ಶಿವಮೊಗ್ಗ ಒನ್ ಕೇಂದ್ರಗಳಲ್ಲಿಯೂ ದಂಡ ಮೊತ್ತ ಪಾವತಿಸಲು ಅವಕಾಶವಿದೆ.
ಹಾಗೆಯೇ ಶಿವಮೊಗ್ಗ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆ ಮೊದಲನೆ ಮಹಡಿಯಲ್ಲಿರುವ ಟ್ರಾಫಿಕ್ ಆಟೋಮೇಷನ್ ಸೆಂಟರ್ ನಲ್ಲಿಯೂ ವಾಹನದ ನೊಂದಣಿ ಸಂಖ್ಯೆ ವಿವರ ನೀಡಿ ದಂಡ ಕಟ್ಟಲು ಅವಕಾಶ ಕಲ್ಪಿಸಲಾಗಿದೆ.
ಫೆ. 11 ರೊಳಗೆ ದಂಡ ಮೊತ್ತ ಪಾವತಿಸುವವರಿಗೆ ಮಾತ್ರ ರಿಯಾಯ್ತಿ ಅನ್ವಯವಾಗಲಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.