
ಸಾವಿರ ಕೋಟಿ ರೂ. ವೆಚ್ಚದ ಶಿವಮೊಗ್ಗ ಸ್ಮಾರ್ಟ್ ಸಿಟಿ ಕಳಪೆ ಕಾಮಗಾರಿಗಳ ತನಿಖೆಗೆ ಆಗ್ರಹ
ಶಿವಮೊಗ್ಗ, ಆ. 26: ‘ಕಳೆದ ಐದು ವರ್ಷಗಳ ಅವಧಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಸರಿಸುಮಾರು ಸಾವಿರ ಕೋಟಿ ರೂ. ಬಿಡುಗಡೆಯಾಗಿದೆ. ಆದರೆ ಯೋಜನೆಯಡಿ ಅನುಷ್ಠಾನ ಮಾಡಲಾದ ಯಾವ ಕಾಮಗಾರಿಗಳೂ ಕೂಡ ಇಲ್ಲಿಯವರೆಗೂ ಪೂರ್ಣವಾಗಿಲ್ಲ. ಜೊತೆಗೆ ಕಳಪೆಯಾಗಿದೆ’ ಎಂದು ನಾಗರೀಕ ಹಿತರಕ್ಷಣಾ ಸಮಿತಿ ಆರೋಪಿಸಿದೆ.
ಶನಿವಾರ ಶಿವಮೊಗ್ಗ ನಗರದ ಮೀಡಿಯಾ ಹೌಸ್ ನಲ್ಲಿ, ಸಮಿತಿಯ ಅಧ್ಯಕ್ಷ ಕೆ. ವಿ. ವಸಂತ ಕುಮಾರ್ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಈ ಹಿನ್ನೆಲೆಯಲ್ಲಿ ಕಳೆದ 5 ವರ್ಷಗಳ ಅವಧಿಯಲ್ಲಿ ನಡೆದ ಸ್ಮಾರ್ಟ್ ಸಿಟಿ ಕಾಮಗಾರಿಗಳ ತನಿಖೆಯಾಗಬೇಕು. ಅಲ್ಲಿಯವರೆಗೂ ಯಾವುದೇ ಕಾರಣಕ್ಕೂ ಮಹಾನಗರ ಪಾಲಿಕೆ ಆಡಳಿತದ ಸುಪರ್ದಿಗೆ ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಹಸ್ತಾಂತರಿಸಿಕೊಳ್ಳಬಾರದು ಎಂದು ಆಗ್ರಹಿಸಿದ್ದಾರೆ.
ಪ್ರಸ್ತುತ ಪಾಲಿಕೆ ಆಡಳಿತವು ನಿರ್ವಹಣೆಯ ಜವಾಬ್ದಾರಿ ವಹಿಸಿಕೊಳ್ಳುವುದಾಗಿ ಹೇಳುತ್ತಿದೆ. ನಿಯಮದ ಪ್ರಕಾರ ಸ್ಮಾರ್ಟ್ ಸಿಟಿಯೇ ತನ್ನ ಗುತ್ತಿಗೆದಾರರ ಮೂಲಕ ಮುಂದಿನ 5 ವರ್ಷಗಳವರೆಗೆ ನಿರ್ವಹಣೆ ಕಾಮಗಾರಿಗಳ ಮಾಡಬೇಕಾಗುತ್ತದೆ. ಆದರೆ ಈಗ ಈ ನಿರ್ವಹಣೆಯ ನಿಯಮವನ್ನೇ ತೆಗೆದು ಹಾಕಲಾಗಿದೆ. ಅವಸರದಲ್ಲಿ ಪಾಲಿಕೆ ತನ್ನ ವಶಕ್ಕೆ ತೆಗೆದುಕೊಂಡು ಜನರ ತೆರಿಗೆ ಹಣದಲ್ಲಿ ನಿರ್ವಹಣೆ ಮಾಡಲು ಹೊರಟಿದೆ. ಇದು ಸರಿಯಲ್ಲ ಎಂದು ತಿಳಿಸಿದ್ದಾರೆ.
ವಿವಿಧ ಪ್ಯಾಕೇಜ್ ಗಳಡಿ ಸ್ಮಾರ್ಟ್ ಸಿಟಿ ಆಡಳಿತವು ರಸ್ತೆ, ಚರಂಡಿ, ಪುಟ್’ಪಾತ್, ಪಾರ್ಕ್, ಬಸ್ ಶೆಲ್ಟರ್, ಕನ್ಸರ್’ವೆನ್ಸಿ, ಸರ್ಕಲ್ ಅಭಿವೃದ್ದಿ, ಶೌಚಾಲಯ, ಯುಜಿ ಕೇಬಲ್ ಅಳವಡಿಕೆ ಸೇರಿದಂತೆ ಹಲವು ಕಾಮಗಾರಿಗಳನ್ನು ನಡೆಸಿದೆ. ಆದರೆ ಹಲವು ಕಾಮಗಾರಿಗಳು ಲೋಪದಿಂದ ಕೂಡಿವೆ. ಈ ಹಿಂದಿನ ಶಾಸಕರಿಗೆ ಈ ಕುರಿತಂತೆ ಹಲವು ಬಾರಿ ದೂರು ನೀಡಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸ್ಮಾರ್ಟ್ ಸಿಟಿ ಕಾಮಗಾರಿಗಳಲ್ಲಿನ ಲೋಪ, ಕಳಪೆ ಕುರಿತಂತೆ ಸಂಘಟನೆಯಿಂದ ಸುಮಾರು 60 ದೂರುಗಳನ್ನು ನೀಡಲಾಗಿದೆ. ಆದರೆ ಲೋಪದೋಷಗಳ ಪರಿಹಾರವಾಗಿಲ್ಲ. ಆದರೆ ಆತುರಾತುರವಾಗಿ ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಪಾಲಿಕೆಗೆ ಹಸ್ತಾಂತರಿಸಿಕೊಳ್ಳಲು ಮುಂದಾಗಿರುವ ಕ್ರಮ ಸರಿಯಲ್ಲ. ತಕ್ಷಣವೇ ಈ ಪ್ರಕ್ರಿಯೆಗೆ ತಡೆ ಹಾಕಬೇಕು ಎಂದು ಆಗ್ರಹಿಸಿದ್ದಾರೆ.
ಗೋಷ್ಠಿಯಲ್ಲಿ ಡಾ. ಸತೀಶ್ ಕುಮಾರ್ ಶೆಟ್ಟಿ, ಎಸ್. ಬಿ. ಅಶೋಕ್ ಕುಮಾರ್, ಚನ್ನವೀರಪ್ಪ ಗಾಮನಗಟ್ಟಿ, ರಂಗಪ್ಪ, ಜನಾರ್ದನ ಪೈ, ವಿನೋದ್ ಪೈ, ಸೀತಾರಾಮ್, ಕೆ. ಜೆ. ಮಿತ್ರ, ಎಸ್. ರಾಜು, ಮಲ್ಲಪ್ಪ ಕೆ. ಎಂ. ಸೇರಿದಂತೆ ಮೊದಲಾದವರಿದ್ದರು.