
ಆ. 31 ರಿಂದ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಆರಂಭವಾಗಲಿದೆ ಲೋಹದ ಹಕ್ಕಿಗಳ ಕಲರವ!
ಶಿವಮೊಗ್ಗ, ಆ. 28: ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಆಗಸ್ಟ್ 31 ರಿಂದ ವಿಮಾನಗಳ ಹಾರಾಟಕ್ಕೆ ಅಧಿಕೃತ ಚಾಲನೆ ದೊರಕಲಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ತಿಳಿಸಿದ್ದಾರೆ.
ಶಿವಮೊಗ್ಗ ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಅಂದು ಬೆಳಿಗ್ಗೆ 9 ಗಂಟೆ 50 ನಿಮಿಷಕ್ಕೆ ಬೆಂಗಳೂರಿನಿಂದ ಹೊರಡಲಿರುವ ವಿಮಾನವು 11 ಗಂಟೆ 5 ನಿಮಿಷಕ್ಕೆ ಶಿವಮೊಗ್ಗಕ್ಕೆ ಆಗಮಿಸಲಿದೆ.

ನಂತರ ಬೆಳಿಗ್ಗೆ 11 ಗಂಟೆ 25 ನಿಮಿಷಕ್ಕೆ ಶಿವಮೊಗ್ಗದಿಂದ ಹೊರಡಲಿರುವ ವಿಮಾನವು 12 ಗಂಟೆ 25 ನಿಮಿಷಕ್ಕೆ ಬೆಂಗಳೂರು ತಲುಪಲಿದೆ ಎಂದು ಮಾಹಿತಿ ನೀಡಿದ್ದಾರೆ. ಉಳಿದಂತೆ ಉಡಾನ್ ಯೋಜನೆಯಡಿ ತಿರುಪತಿ, ಚೆನ್ನೈ, ಗೋವಾಕ್ಕೆ ಮುಂದಿನ ಎರಡು ತಿಂಗಳಲ್ಲಿ ಶಿವಮೊಗ್ಗದಿಂದ ವಿಮಾನ ಹಾರಾಟ ಆರಂಭವಾಗಲಿದೆ.
ಉಡಾನ್ ಯೋಜನೆಯಡಿ ಈ ಮಾರ್ಗಗಳಿಗೆ ಹಾರಾಟ ನಡೆಸಲಿರುವ ವಿಮಾನಗಳಿಗೆ ಕೇಂದ್ರ ಸರ್ಕಾರದಿಂದ ಸಬ್ಸಿಡಿ ದೊರಕಲಿದೆ ಎಂದು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣವು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಮೇಲ್ದರ್ಜೆಗೇರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಇದೇ ವೇಳೆ ಬಿ.ವೈ.ರಾಘವೇಂದ್ರ ಅವರು ತಿಳಿಸಿದ್ದಾರೆ.
ಏರ್ ಪೋರ್ಟ್ ಗೆ ಕುವೆಂಪು ಹೆಸರು ನಾಮಕರಣ
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ದಿವಂಗತ ಕುವೆಂಪು ಅವರ ಹೆಸರು ಬಹುತೇಕ ಅಂತಿಮವಾಗಿದೆ. ಈಗಾಗಲೇ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ವಿತರಣೆ ಮಾಡುತ್ತಿರುವ ಟಿಕೆಟ್ ನಲ್ಲಿ ಕುವೆಂಪು ಏರ್ ಪೋರ್ಟ್ ಎಂಬ ಹೆಸರು ಮುದ್ರಿತವಾಗಿ ಬರುತ್ತಿದೆ.

ಹಾಗೆಯೇ ವಿಮಾನಯಾನ ಸಂಸ್ಥೆಯ ವೆಬ್ ಸೈಟ್ ನಲ್ಲಿಯೂ ಕುವೆಂಪು ವಿಮಾನ ನಿಲ್ದಾಣ ಎಂಬ ಹೆಸರು ನಮೂದಿಸಲಾಗಿದೆ. ಸೋಮವಾರ ಶಿವಮೊಗ್ಗ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಅವರು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರು ಅಂತಿಮವಾಗಿದೆ. ವೆಬ್ ಸೈಟ್ ಹಾಗೂ ಟಿಕೆಟ್ ನಲ್ಲಿ ಕುವೆಂಪು ಏರ್ ಪೋರ್ಟ್ ಎಂಬ ಹೆಸರು ಮುದ್ರಿತವಾಗಿದೆ ಎಂದು ಮಾಹಿತಿ ನೀಡಿದ್ದಾರೆ.