
ಭದ್ರಾವತಿ ವಿಐಎಸ್ಎಲ್ ಕಾರ್ಖಾನೆಯ ಎನ್.ಆರ್.ಎಂ ಘಟಕ ಕಾರ್ಯಾರಂಭ
ಭದ್ರಾವತಿ, ಆ. 29: ಒಂದಾನೊಂದು ಕಾಲದಲ್ಲಿ ರಾಷ್ಟ್ರ – ರಾಜ್ಯದ ಪ್ರಮುಖ ಕಾರ್ಖಾನೆಯಾಗಿ ಗುರುತಿಸಿಕೊಂಡಿದ್ದ, ನಷ್ಟದ ಕಾರಣದಿಂದ ಉತ್ಪಾದನೆ ಸ್ಥಗಿತಗೊಳಿಸಿದ್ದ, ಭದ್ರಾವತಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಮತ್ತೆ ಪುನಾರಾರಂಭಗೊಳಿಸುವ ನಿರ್ಧಾರವನ್ನು ಇತ್ತೀಚೆಗೆ ಕೇಂದ್ರದ ಭಾರತೀಯ ಉಕ್ಕು ಪ್ರಾಧಿಕಾರ ಕೈಗೊಂಡಿತ್ತು. ಇದರ ಬೆನ್ನಲ್ಲೇ ಕಾರ್ಖಾನೆಯ ಎನ್.ಆರ್.ಎಂ ಘಟಕ ಸೋಮವಾರದಿಂದ ಕಾರ್ಯಾರಂಭಗೊಂಡಿದೆ. ಇದು ಕಾರ್ಮಿಕರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ.

ಕಳೆದ 6 ದಿನಗಳ ಹಿಂದೆ ಕೇಂದ್ರ ಉಕ್ಕು ಪ್ರಾಧಿಕಾರವು, ಬಿಲಾಯ್ ಘಟಕದಿಂದ ಕಾರ್ಖಾನೆಗೆ 19 ವ್ಯಾಗನ್ ಗಳಲ್ಲಿ ಬ್ಲೂಮ್ ಗಳನ್ನು ರವಾನಿಸಿತ್ತು. ಇದಾದ ನಂತರ ಕಾರ್ಖಾನೆಯ ಎನ್.ಆರ್.ಎಂ ಘಟಕ ಆರಂಭಗೊಳಿಸಲಾಗಿದೆ. ಹಂತಹಂತವಾಗಿ ಪೂರ್ಣ ಪ್ರಮಾಣದಲ್ಲಿ ಕಾರ್ಖಾನೆ ಕಾರ್ಯಾರಂಭಗೊಳ್ಳುವ ಲಕ್ಷಣಗಳು ಗೋಚರವಾಗುತ್ತಿದೆ.
ಇತಿಹಾಸ : ಮೈಸೂರು ಅರಸ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ದಿವಾನ ಸರ್ ಎಂ ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್ ಅವರ ದೂರದೃಷ್ಟಿಯ ಫಲವಾಗಿ ಭದ್ರಾವತಿ ಪಟ್ಟಣದ ಭದ್ರಾ ನದಿ ದಂಡೆಯ ಮೇಲೆ 1923 ರಲ್ಲಿ ವಿಐಎಸ್‌ಎಲ್ ಕಾರ್ಖಾನೆ ಆರಂಭಿಸಲಾಗಿತ್ತು. ಉತ್ಕೃಷ್ಟ ಉಕ್ಕು, ಕಬ್ಬಿಣ ತಯಾರಿಕೆಯಿಂದ ಸಾಕಷ್ಟು ಪ್ರಸಿದ್ದಿ ಸಂಪಾದಿಸಿತ್ತು. ಸಾವಿರಾರು ಜನರಿಗೆ ಪ್ರತ್ಯಕ್ಷ – ಪರೋಕ್ಷವಾಗಿ ಕಾರ್ಖಾನೆಯಿಂದ ಉದ್ಯೋಗ ಸಿಕ್ಕಿತ್ತು. ಭದ್ರಾವತಿ ಆರ್ಥಿಕತೆಯ ಜೀವನಾಡಿಯಾಗಿತ್ತು.

ಕರ್ನಾಟಕ ಸರ್ಕಾರದ ಅಧೀನದಲ್ಲಿದ್ದ ವಿಐಎಸ್‌ಎಲ್ ಅನ್ನು1989 ರಲ್ಲಿ ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸಲಾಗಿತ್ತು. ಬಳಿಕ ಉಕ್ಕು ಪ್ರಾಧಿಕಾರಕ್ಕೆ ವಿಐಎಸ್‌ಎಲ್ ಅನ್ನು ಸೇರಿಸಲಾಗಿತ್ತು. ಆದರೆ ನಷ್ಟದ ಕಾರಣ, ಸ್ವಂತ ಗಣಿಯಿಲ್ಲದಿರುವುದು ಸೇರಿದಂತೆ ನಾನಾ ಕಾರಣದಿಂದ ಕಾರ್ಖಾನೆಯನ್ನು ಮುಚ್ಚುವ ನಿರ್ಧಾರವನ್ನು ಉಕ್ಕು ಪ್ರಾಧಿಕಾರ ಕೈಗೊಂಡಿತ್ತು. ಖಾಸಗೀಕರಣ ಪ್ರಕ್ರಿಯೆ ಕೂಡ ನಡೆದಿತ್ತು.
ಕಾರ್ಖಾನೆ ಮುಚ್ಚುವರ ನಿರ್ಧಾರದ ವಿರುದ್ದ ಕಾರ್ಮಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದರು. ಮತ್ತೊಂದೆಡೆ ಸಂಸದ ಬಿ.ವೈ.ರಾಘವೇಂದ್ರ ಅವರು ಕಾರ್ಖಾನೆ ಪುನಾರಾರಂಭಕ್ಕೆ ಕ್ರಮಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು. ಇದೆಲ್ಲದರ ಫಲವಾಗಿ ಇದೀಗ ಮುಚ್ಚಿದ್ದ ಕಾರ್ಖಾನೆ ಮತ್ತೆ ಪುನಾರಾರಂಭಗೊಳ್ಳುವಂತಾಗಿದೆ.