
ಭದ್ರಾವತಿ ತಾಲೂಕು ಮಾವಿನಕೆರೆ ಗ್ರಾಮದಲ್ಲಿ ತಾಯಿಯನ್ನೇ ಕೊಲೆ ಮಾಡಿದ ಮಗ!
ಭದ್ರಾವತಿ, ಆ. 29: ಹೆತ್ತ ತಾಯಿಯನ್ನೇ ಮಗನೋರ್ವ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಭದ್ರಾವತಿ ತಾಲೂಕಿನ ಮಾವಿನಕೆರೆ ಗ್ರಾಮದಲ್ಲಿ ನಡೆದಿದೆ.
ಸುಲೋಚನಮ್ಮ (57) ಕೊಲೆಗೀಡಾದ ತಾಯಿ ಎಂದು ಗುರುತಿಸಲಾಗಿದೆ. ಅವರ ಪುತ್ರ ಸಂತೋಷ್ (42) ಆರೋಪಿತ ಪುತ್ರನಾಗಿದ್ದಾನೆ.
ಭಾನುವಾರ ರಾತ್ರಿ ಆರೋಪಿಯು ಮದ್ಯ ಸೇವಿಸಿ ಮನೆಗೆ ಆಗಮಿಸಿದ್ದು, ಈ ವೇಳೆ ತಾಯಿಯ ಜೊತೆ ಜಗಳವಾಡಿದ್ದಾನೆ. ನಂತರ ಮಾರಕಾಸ್ತ್ರದಿಂದ ತಾಯಿ ಮೇಲೆ ದಾಳಿ ನಡೆಸಿ ಕೊಲೆ ಮಾಡಿದ್ದಾನೆ.
ಸೋಮವಾರ ಮಧ್ಯಾಹ್ನ ಕೊಲೆ ಕೃತ್ಯ ಬೆಳಕಿಗೆ ಬಂದಿದೆ. ಆರೋಪಿ ಪುತ್ರನು ಮನೆಯ ಸಮೀಪದ ಖಾಲಿ ಜಾಗದಲ್ಲಿ ಆರಾಮಾಗಿ ಮಲಗಿಕೊಂಡಿದ್ದು ಗ್ರಾಮಸ್ಥರ ಗಮನಕ್ಕೆ ಬಂದಿದೆ. ಆರೋಪಿ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಭದ್ರಾವತಿ ಹೊಸಮನೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.