
ಮುಂಗಾರು ಮಳೆ ಕೊರತೆ – ಬೀಳಲಾರಂಭಿಸಿದೆ ಬೇಸಿಗೆ ಬಿಸಿಲು : ಬರ ಘೋಷಣೆಗೆ ಹೆಚ್ಚಿದ ಒತ್ತಡ!
ವರದಿ : ಬಿ. ರೇಣುಕೇಶ್
ಶಿವಮೊಗ್ಗ, ಆ. 30: ಶಿವಮೊಗ್ಗ ಜಿಲ್ಲೆಯಲ್ಲಿ ಮುಂಗಾರು ಮಳೆಯ ಕಣ್ಣಾಮುಚ್ಚಾಲೆಯಾಟ ಮುಂದುವರಿದಿದೆ. ಜೂನ್ ತಿಂಗಳಲ್ಲಿ ದುರ್ಬಲಗೊಂಡಿದ್ದ ವರ್ಷಧಾರೆಯಿಂದ ಕವಿದಿದ್ದ ಬರ ಸ್ಥಿತಿ, ಜುಲೈ ತಿಂಗಳ ಮಳೆಯಿಂದ ಮರೆಯಾಗಿತ್ತು. ಆದರೆ ಆಗಸ್ಟ್ ತಿಂಗಳಲ್ಲಿ ಮಳೆ ಕೈಕೊಟ್ಟಿರುವುದರ ಜೊತೆಗೆ, ಬೇಸಿಗೆ ಬಿಸಿಲು ಬೀಳಲಾರಂಭಿಸಿದೆ. ಇದರಿಂದ ಬರದ ಕರಿಛಾಯೆ ಮತ್ತೇ ಆವರಿಸುವಂತಾಗಿದೆ!
ಕಳೆದ ವರ್ಷ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿತ್ತು. ಈ ವೇಳೆಗಾಗಲೇ ಜಿಲ್ಲೆಯ ಎಲ್ಲ ಜಲಾಶಯಗಳು, ಕೆರೆಕಟ್ಟೆಗಳು ತುಂಬಿ ತುಳುಕುತ್ತಿದ್ದವು. ಹಲವೆಡೆ ಭಾರೀ ಮಳೆಯಿಂದ ಅತೀವೃಷ್ಟಿ ಭೀತಿ ಎದುರಾಗುವಂತಾಗಿತ್ತು. ಪ್ರಸ್ತುತ ವರ್ಷ ಆಗಸ್ಟ್ ತಿಂಗಳು ಅಂತ್ಯಗೊಳ್ಳಲಾರಂಭಿಸಿದ್ದರೂ, ಪ್ರಮುಖ ಡ್ಯಾಂಗಳು ಭರ್ತಿಯಾಗಿಲ್ಲ. ಹಲವು ತಾಲೂಕುಗಳಲ್ಲಿ ಕೆರೆಕಟ್ಟೆಗಳಲ್ಲಿ ನೀರಿನ ಸಂಗ್ರಹದಲ್ಲಿ ತೀವ್ರ ಇಳಿಕೆ ಕಂಡುಬಂದಿದೆ.
ಮಳೆ ಕೊರತೆಯಿಂದ ಕೃಷಿ ಚಟುವಟಿಕೆ ಮೇಲೆ ಗಂಭೀರ ಪರಿಣಾಮ ಬೀರುವಂತಾಗಿದೆ. ಹಲವೆಡೆ ಮೆಕ್ಕೆಜೋಳ ಬಿಸಿಲಿಗೆ ಒಣಗಲಾರಂಭಿಸಿದೆ. ಗಿಡಗಳ ಬೆಳವಣಿಗೆ ಕುಂಠಿತವಾಗಿದೆ. ತೆನೆಕಟ್ಟುವ ಹಂತದಲ್ಲಿ ಮಳೆ ಕೊರತೆ ಎದುರಾಗಿರುವುದರಿಂದ, ನಿರೀಕ್ಷಿತ ಇಳುವರಿ ಸಾಧ್ಯವಾಗುವುದಿಲ್ಲ ಎಂದು ಮೆಕ್ಕೆಜೋಳ ಬೆಳೆಗಾರರು ಹೇಳುತ್ತಾರೆ.
ಮತ್ತೊಂದೆಡೆ, ಮಳೆ ಕೊರೆತೆಯು ಭತ್ತ ಬೆಳೆಯ ಮೇಲೆಯೂ ಪರಿಣಾಮ ಬೀರುವಂತೆ ಮಾಡಿದೆ. ಹಲವೆಡೆ ಭತ್ತ ನಾಟಿ ವಿಳಂಬವಾಗಿಸಿದೆ. ಮತ್ತೆ ಕೆಲವೆಡೆ ಕಡಿಮೆ ನೀರು ಬಯಸುವ ಬೆಳೆಗಳತ್ತ ರೈತರು ಚಿತ್ತ ಹರಿಸಲಾರಂಭಿಸಿದ್ದಾರೆ.
ಹಲವು ಗ್ರಾಮಗಳಲ್ಲಿನ ಕೆರೆಕಟ್ಟೆಗಳ ನೀರಿನ ಸಂಗ್ರಹದಲ್ಲಿ, ತೀವ್ರ ಸ್ವರೂಪದ ಕೊರತೆ ಕಂಡುಬಂದಿದೆ. ಮುಂದಿನ ದಿನಗಳಲ್ಲಿ ಮಳೆಯಾಗದಿದ್ದರೆ, ಮುಂದಿನ ದಿನಗಳಲ್ಲಿ ಜನ – ಜಾನುವಾರುಗಳ ಕುಡಿಯುವ ನೀರಿಗೂ ತತ್ವಾರ ಎದುರಾಗುವ ಹಾಗೂ ಅಂತರ್ಜಲ ಮಟ್ಟ ಕುಸಿಯುವ ಆತಂಕವಿದೆ.
ಆಗ್ರಹ: ಶಿವಮೊಗ್ಗ ಜಿಲ್ಲೆಯ ಎಲ್ಲ 7 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಬೇಕೆಂಬ ಆಗ್ರಹ ಅನ್ನದಾತರ ವಲಯದಿಂದ ಕೇಳಿಬರಲಾರಂಭಿಸಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕೆಲ ತಾಲೂಕುಗಳಲ್ಲಿ ಪ್ರತಿಭಟನೆ ಕೂಡ ಆರಂಭವಾಗಿವೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಯಾವ ಕ್ರಮಕೈಗೊಳ್ಳಲಿದೆ ಎಂಬುವುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ.
ಲಿಂಗನಮಕ್ಕಿ, ಭದ್ರಾ ಡ್ಯಾಂ ನೀರಿನ ಮಟ್ಟ : ತಾಲೂಕುವಾರು ಮಳೆ ವಿವರ
ಆಗಸ್ಟ್ 1 ರಿಂದ 30 ರವರೆಗೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಿದ್ದ ಮಳೆ ಹಾಗೂ ಆಗಸ್ಟ್ ತಿಂಗಳ ವಾಡಿಕೆ ಮಳೆ ವಿವರ ಮುಂದಿನಂತಿದೆ. ಶಿವಮೊಗ್ಗ 36. 50 (ವಾಡಿಕೆ ಮಳೆ : 136) ಮಿ.ಮೀ., ಭದ್ರಾವತಿ 55. 30 (ವಾ. ಮ. : 161. 00) ಮಿ.ಮೀ., ತೀರ್ಥಹಳ್ಳಿ158. 90 (ವಾ. ಮ. : 782) ಮಿ.ಮೀ., ಸಾಗರ 163. 20 (ವಾ.ಮ. : 624) ಮಿ.ಮೀ., ಶಿಕಾರಿಪುರ 35. 70 (ವಾ.ಮ. : 178. 00) ಮಿ.ಮೀ., ಸೊರಬ 58 (ವಾ.ಮ. : 329) ಮಿ.ಮೀ., ಹೊಸನಗರ ತಾಲೂಕಿನಲ್ಲಿ 165.60 (ವಾ.ಮ. : 624) ವರ್ಷಧಾರೆಯಾಗಿದೆ.
ಉಳಿದಂತೆ ರಾಜ್ಯದ ಪ್ರಮುಖ ಜಲ ವಿದ್ಯುತ್ ಉತ್ಪಾದನಾ ಕೇಂದ್ರ ಲಿಂಗನಮಕ್ಕಿ ಹಾಗೂ ಮಧ್ಯ ಕರ್ನಾಟಕದ ಪ್ರಮುಖ ಡ್ಯಾಂ ಆದ ಭದ್ರಾ ಡ್ಯಾಂ ಗರಿಷ್ಠ ಮಟ್ಟ ತಲುಪಿಲ್ಲ. ಆಗಸ್ಟ್ 30 ರ ಮಾಹಿತಿಯಂತೆ ಲಿಂಗನಮಕ್ಕಿ ಡ್ಯಾಂ ನೀರಿನ ಮಟ್ಟ 1788. 7 (ಗರಿಷ್ಠ ಮಟ್ಟ : 1819) ಅಡಿಯಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂ ನೀರಿನ ಮಟ್ಟ 1814. 2 ಅಡಿಯಿತ್ತು. ಪ್ರಸ್ತುತ ಡ್ಯಾಂನ ಒಳಹರಿವು 1549 ಕ್ಯೂಸೆಕ್ ಇದ್ದು, 8048. 6 ಕ್ಯೂಸೆಕ್ ನೀರನ್ನು ಹೊರ ಹರಿಸಲಾಗುತ್ತಿದೆ.
ಭದ್ರಾ ಡ್ಯಾಂ ನೀರಿನ ಮಟ್ಟ 164. 11 (ಗರಿಷ್ಠ ಮಟ್ಟ : 186) ಅಡಿಯಿದೆ. ಕಳೆದ ವರ್ಷ ಈ ವೇಳೆಗಾಗಲೇ ಡ್ಯಾಂ ಗರಿಷ್ಠ ಮಟ್ಟ ತಲುಪಿತ್ತು. ಡ್ಯಾಂನಿಂದ ನೀರು ಹೊರ ಹರಿಸಲಾಗುತ್ತಿತ್ತು. ಪ್ರಸ್ತುತ ಡ್ಯಾಂನ ಒಳಹರಿವು 352 ಕ್ಯೂಸೆಕ್ ಇದ್ದು, 3222ಕ್ಯೂಸೆಕ್ ನೀರನ್ನು ಹೊರ ಹರಿಸಲಾಗುತ್ತಿದೆ.