ಧರ್ಮದ ಬಗ್ಗೆ ಭಾಷಣ ಮಾಡುವವರು ಧರ್ಮವಂತರಾಗಿ ಬದುಕುತ್ತಿಲ್ಲ : ಸಿಎಂ ಸಿದ್ದರಾಮಯ್ಯ ವ್ಯಂಗ್ಯ

ಬೆಂಗಳೂರು ಆ 31: ಕುಳುವ ಸಮುದಾಯವನ್ನು ಪರಿಶಿಷ್ಟ ಜಾತಿಯ ಪಟ್ಟಿಯಿಂದ ತೆಗೆಯಲು ಸಾಧ್ಯವೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆಯ ಮಾತುಗಳನ್ನು ಆಡಿದರು. 

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಶ್ರೀ ನುಲಿಯ ಚಂದಯ್ಯ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು. 

ಧರ್ಮದ ಬಗ್ಗೆ ಭಾಷಣ ಮಾಡುವವರು ಧರ್ಮವಂತರಾಗಿ ಬದುಕುತ್ತಿಲ್ಲ : ಸಿಎಂ ಸಿದ್ದರಾಮಯ್ಯ ವ್ಯಂಗ್ಯ

ಕುಳುವ ಸಮಾಜದ ಹಲವರಲ್ಲಿ ತಮ್ಮನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಹೊರಗೆ ಇಡಬಹುದು ಎನ್ನುವ ಆತಂಕ ಹಲವರಲ್ಲಿದೆ. ಆದರೆ, ನಾನು ಹೇಳ್ತಾ ಇದ್ದೇನೆ. ಆ ಆತಂಕ ಬೇಡ ಎಂದರು. 

ಶಿಕ್ಷಣ ಹೆಚ್ಚಾದಷ್ಟೂ ಜಾತಿ ವ್ಯವಸ್ಥೆ ನಶಿಸಬೇಕಿತ್ತು. ಆದರೆ ಹಾಗೇ ಉಳಿದುಕೊಂಡಿದೆ. ಬಸವಾದಿ ಶರಣರು 12 ನೇ ಶತಮಾನದಲ್ಲೇ ಜಾತಿ ವ್ಯವಸ್ಥೆ ಮತ್ತು ತಾರತಮ್ಯದ ವಿರುದ್ಧ ಕ್ರಾಂತಿ ಮಾಡಿದ್ದರು. ನುಲಿಯ ಚಂದಯ್ಯ ಬಸವಾದಿ ಶರಣರಲ್ಲಿ ಪ್ರಮುಖರು. ಶರಣರಲ್ಲೇ ಅಗ್ರಗಣ್ಯರು. ಹೀಗಾಗಿ ಬಸವಣ್ಣನವರಿಗೆ ನುಲಿಯ ಚಂದಯ್ಯರ ಬಗ್ಗೆ ಬಹಳ ಅಭಿಮಾನ ಪ್ರೀತಿ ಇತ್ತು ಎಂದು ಮುಖ್ಯಮಂತ್ರಿಗಳು ವಿವರಿಸಿದರು. 

ಸನಾದಿ ಅಪ್ಪಣ್ಣ ಕೂಡ ಕುಳುವ ಸಮಾಜದವರು. ಡಾ.ರಾಜ್ ಕುಮಾರ್ ಅವರ ಅಭಿನಯದ ಸನಾದಿ ಅಪ್ಪಣ್ಣ ಸಿನಿಮಾವನ್ನು ನಾನು ಹಲವು ಬಾರಿ ನೋಡಿದ್ದೇನೆ. ನನಗೆ ರಾಜ್ ಕುಮಾರ್ ಅವರ ಸಿನಿಮಾವನ್ನು ಬರಿ ಒಂದು ಸಾರಿ ನೋಡಿದರೆ ಸಮಾಧಾನ ಆಗುತ್ತಿರಲಿಲ್ಲ. ಅದಕ್ಕೇ ಪದೇ ಪದೇ  ನೋಡುತ್ತಿದ್ದೆ ಎಂದರು. 

ಸಮಾಜದಲ್ಲಿ ಸ್ವಾರ್ಥಿಗಳಿಂದ ಜಾತಿ ವ್ಯವಸ್ಥೆ ರೂಪುಗೊಂಡಿತು. ಯಾವ್ಯಾವ ಕಸುಬನ್ನು ಯಾರು ಮಾಡುತ್ತಿದ್ದಾರೋ ಅದದೇ ಕಸುಬನ್ನೇ ಮಾಡಿಕೊಂಡಿರಲಿ. ಅವರ್ಯಾರೂ ಪ್ರಗತಿ ಕಾಣಬಾರದು ಎನ್ನುವ ಸ್ವಾರ್ಥ ಜಾತಿ ವ್ಯವಸ್ಥೆಗೆ ಕಾರಣ ಎಂದರು. 

ಧರ್ಮವನ್ನು ಅರ್ಥ ಮಾಡಿಕೊಳ್ಳಲು ದೊಡ್ಡ ಗ್ರಂಥಗಳನ್ನು ಓದುವ ಅಗತ್ಯವಿಲ್ಲ. ಮನುಷ್ಯ ಮನುಷ್ಯನನ್ನು ಪ್ರೀತಿಸುವುದೇ ಧರ್ಮ. ಜಾತಿ-ಧರ್ಮದ ಹೆಸರಲ್ಲಿ ಮನುಷ್ಯರನ್ನು ದ್ವೇಷಿಸುವುದೇ ಅಧರ್ಮ. ಧರ್ಮದ ಬಗ್ಗೆ ಭಾಷಣ ಮಾಡುವುದು ಸುಲಭ. ಆದರೆ ಧರ್ಮವಂತರಾಗಿ ಬದುಕುವುದು ಕಷ್ಟ. ಧರ್ಮದ ಬಗ್ಗೆ ಭಾಷಣ ಮಾಡುವವರು ಧರ್ಮವಂತರಾಗಿ ಬದುಕುತ್ತಿದ್ದಾರಾ ಎಂದು ಸಿಎಂ ಪ್ರಶ್ನಿಸಿದರು. 

ಸಾಣೇಹಳ್ಳಿ ಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅವರು ವಹಿಸಿದ್ದರು. 

ಕೊರಮ ಕೊರಚ ಕೊರವ ಸಮುದಾಯಗಳ ಒಕ್ಕೂಟದ ರಾಜ್ಯಾಧ್ಯಕ್ಷರಾದ ಶಿವಾನಂದ ಎಂ ಭಜಂತ್ರಿ, ಸಮುದಾಯದ ಮುಖಂಡರುಗಳಾದ AKMS ನ ಪಲ್ಲವಿ, ಬಿ.ಎಸ್.ಆನಂದಕುಮಾರ್ ಏಕಲವ್ಯ, ಆದರ್ಶ್ ಯಲ್ಲಪ್ಪ, ಎಂ.ವೆಂಕಟೇಶ್, ಜಿ.ಚಂದ್ರಣ್ಣ ಸೇರಿ ಹಲವು ಪ್ರಮುಖರು ವೇದಿಕೆಯಲ್ಲಿದ್ದರು.

ದೇವರನ್ನು ಮುಂದಿಟ್ಟು ಜಾತಿ-ಧರ್ಮದ ಸಂಘರ್ಷ ಸೃಷ್ಟಿಸುವುದು ದೇವರಿಗೆ ಮಾಡುವ ಅವಮಾನ: ಸಿಎಂ ಸಿದ್ದರಾಮಯ್ಯ

ಬೆಂಗಳೂರು ಆ 31: ದೇವರನ್ನು ಮುಂದಿಟ್ಟು ಜಾತಿ-ಧರ್ಮದ ಸಂಘರ್ಷ ಸೃಷ್ಟಿಸುವುದು ದೇವರಿಗೆ ಮಾಡುವ ಅವಮಾನ. ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.‌

ಕನ್ನಡ ಮತ್ತು ಸಂಸ್ಕೃತಿ‌ ಇಲಾಖೆ ರವೀಂದ್ರ ಕಲಾ ಕ್ಷೇತ್ರದಲ್ಲಿ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.

ದೇವರನ್ನು ಮುಂದಿಟ್ಟು ಜಾತಿ-ಧರ್ಮದ ಸಂಘರ್ಷ ಸೃಷ್ಟಿಸುವುದು ದೇವರಿಗೆ ಮಾಡುವ ಅವಮಾನ: ಸಿಎಂ ಸಿದ್ದರಾಮಯ್ಯ

ಜಾತಿ, ಧರ್ಮಗಳ ನಡುವೆ ಸಂಘರ್ಷ ಸೃಷ್ಟಿಸುವ ಶಕ್ತಿಗಳು ನಾರಾಯಣಗುರುಗಳ ಅವಧಿಯಲ್ಲೂ ಇದ್ದವು. ಈಗಲೂ ಇವೆ. ನಾರಾಯಣಗುರುಗಳು ಸಂಘರ್ಷಕ್ಕೆ ಕಾರಣ ಆಗದಂತೆ ಸಮಾಜದಲ್ಲಿ ವ್ಯಾಪಕ ಬದಲಾವಣೆ ತಂದರು.

ದೇವರ ದೃಷ್ಟಿಯಲ್ಲಿ ಎಲ್ಲರೂ ಒಂದೆ. ಬಟ್ಟೆ ಬಿಚ್ಚಿ ದೇವಾಲಯಕ್ಕೆ ಬನ್ನಿ ಎನ್ನುವುದು ದೇವರ ದೃಷ್ಟಿಯಲ್ಲಿ ಅಮಾನವೀಯ. ದೇವರನ್ನು ಮುಂದಿಟ್ಟುಕೊಂಡು ತಾರತಮ್ಯ ಆಚರಿಸುವುದು ದೇವರಿಗೆ ಮಾಡುವ ಅವಮಾನ. ದೇವರನ್ನೇ ಮುಂದಿಟ್ಟುಕೊಂಡು ಜಾತಿ, ಧರ್ಮ ಸಂಘರ್ಷ ಸೃಷ್ಟಿಸುವ ವಿಕೃತಿಯನ್ನು ಈಗಲೂ ಆಚರಿಸಲಾಗುತ್ತಿದೆ.‌ ಈ ತಾರತಮ್ಯಕ್ಕೆ ನಾರಾಯಣಗುರುಗಳು ಭಿನ್ನವಾದ ಆಚರಣೆ ಕಂಡುಕೊಂಡರು. ನಿಮಗೆ ಪ್ರವೇಶವಿಲ್ಲದ ದೇವಸ್ಥಾನಗಳಿಗೆ ಹೋಗಲೇಬೇಡಿ. ನೀವೇ ನಿಮ್ಮ ದೇವರುಗಳಿಗೆ ದೇವಸ್ಥಾನ ಕಟ್ಟಿ ಪೂಜೆ ಮಾಡಿ ಎಂದರು. ಈ ಸಮಾಜ ಸುಧಾರಣೆಯ ಕ್ರಾಂತಿಕಾರಕ ಧಾರ್ಮಿಕ‌ ಚಳವಳಿ ಪರಿಣಾಮವಾಗಿ ಕೇರಳದಲ್ಲಿ 60 ದೇವಸ್ಥಾನಗಳನ್ನು ನಿರ್ಮಿಸಿದರು. ಉಳಿದ ದೇವಸ್ಥಾನಗಳಿಗೆ ಪ್ರವೇಶ ಇಲ್ಲದ ಶೂದ್ರ ಮತ್ತು ದಲಿತ ಸಮುದಾಯವನ್ನು ತಾವೇ ಕಟ್ಟಿಸಿದ ದೇವಸ್ಥಾನಗಳಿಗೆ ಪ್ರವೇಶಿಸುವಂತೆ ಕ್ರಾಂತಿ ಮಾಡಿದರು ಎಂದು ಹಲವು ನಿದರ್ಶನಗಳನ್ನು ಉದಾಹರಿಸಿದರು.

ವಿದ್ಯೆ ಕಲಿತು ಸ್ವತಂತ್ರರಾಗಿ, ಸಂಘಟಿತರಾಗಿ ಬಲಯುತರಾಗಿ ಎನ್ನುವುದು ನಾರಾಯಣಗುರುಗಳು ಶೂದ್ರ-ದಲಿತ ಸಮುದಾಯಕ್ಕೆ ನೀಡಿದ ಅತ್ಯುನ್ನತ ಧ್ಯೇಯ ಎಂದರು.

ನಾರಾಯಣಗುರುಗಳು ಒಂದು ಜಾತಿ, ಧರ್ಮಕ್ಕೆ ಸೇರಿದವರಲ್ಲ. ಅವರು ಜಾತಿ-ಧರ್ಮದ ತಾರತಮ್ಯಗಳನ್ನು ಮೀರಿದ ವಿಶ್ವಮಾನವ. ಹೀಗಾಗಿ ವಿಶ್ವ ಮಾನವ ನಾರಾಯಣಗುರುಗಳ ಜಯಂತಿಯನ್ನು ಸರ್ಕಾರವೇ ಆಚರಿಸಬೇಕು ಎಂದು ಆದೇಶ ಮಾಡಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.

ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನದ ವಿಖ್ಯಾತಾನಂದ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಸಚಿವ ಮಧು ಬಂಗಾರಪ್ಪ, ಶಾಸಕರಾದ ಗೋಪಾಲಕೃಷ್ಣ ಬೇಳೂರು, ಹೆಚ್.ಆರ್.ಗವಿಯಪ್ಪ, ಆರ್ಯ ಈಡಿಗ ಸಮಾಜದ ಅಧ್ಯಕ್ಷರಾದ ಡಾ.ಎಂ.ತಿಮ್ಮೇಗೌಡರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬೆಂಗಳೂರು ಶಿವಮೊಗ್ಗ ನಡುವೆ ವಿಮಾನ ಹಾರಾಟಕ್ಕೆ ಚಾಲನೆ : ವಾಟರ್ ಸೆಲ್ಯೂಟ್ ಗೌರವದ ಮೂಲಕ ಸ್ವಾಗತ Previous post ಬೆಂಗಳೂರು ಶಿವಮೊಗ್ಗ ನಡುವೆ ವಿಮಾನ ಹಾರಾಟಕ್ಕೆ ಚಾಲನೆ : ವಾಟರ್ ಸೆಲ್ಯೂಟ್ ಗೌರವದ ಮೂಲಕ ಸ್ವಾಗತ
ಶಿವಮೊಗ್ಗ : ಗಣೇಶ ಹಬ್ಬದ ವೇಳೆ ಪೊಲೀಸರೊಂದಿಗೆ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಲು ಸಾರ್ವಜನಿಕರಿಗೆ ಅವಕಾಶ Next post ಶಿವಮೊಗ್ಗ : ಗಣೇಶ ಹಬ್ಬದ ವೇಳೆ ಪೊಲೀಸರೊಂದಿಗೆ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಲು ಸಾರ್ವಜನಿಕರಿಗೆ ಅವಕಾಶ