
ಕನ್ನಡ ಭಾಷೆಗೆ ಆದ್ಯತೆ ನೀಡಲು, ರಾಷ್ಟ್ರಕವಿ ಕುವೆಂಪು ನಾಮಫಲಕ ಅಳವಡಿಕೆಗೆ ಆಗ್ರಹಿಸಿ ಶಿವಮೊಗ್ಗ ವಿಮಾನ ನಿಲ್ದಾಣ ಟರ್ಮಿನಲ್ ಎದುರು ಪ್ರತಿಭಟನೆ!
ಶಿವಮೊಗ್ಗ, ಸೆ. 1: ವಿಮಾನ ನಿಲ್ದಾಣದಲ್ಲಿ ಮಾಹಿತಿ ಫಲಕ ಸೇರಿದಂತೆ ಎಲ್ಲೆಡೆ ಕನ್ನಡ ಭಾಷೆಗೆ ಆದ್ಯತೆ ನೀಡಬೇಕು. ರಾಷ್ಟ್ರಕವಿ ಕುವೆಂಪು ಅವರ ನಾಮಫಲಕ ಹಾಕಬೇಕು ಎಂದು ಆಗ್ರಹಿಸಿ, ಕನ್ನಡ ಕಾರ್ಮಿಕರ ರಕ್ಷಣಾ ವೇದಿಕೆಯು ವಿಮಾನ ನಿಲ್ದಾಣ ಟರ್ಮಿನಲ್ ಎದುರು ಶುಕ್ರವಾರ ಪ್ರತಿಭಟನೆ ನಡೆಸಿ ಅಧಿಕಾರಿಗಳಿಗೆ ಮನವಿ ಪತ್ರ ಅರ್ಪಿಸಿತು.
ರಾಷ್ಟ್ರಕವಿ ಕುವೆಂಪು ಹೆಸರಿರುವ ವಿಮಾನ ನಿಲ್ದಾಣವು ಜಿಲ್ಲೆಯ ಹೆಮ್ಮೆಯ ಸಂಗತಿಯಾಗಿದೆ. ಆದರೆ ವಿಮಾನ ನಿಲ್ದಾಣದ ಪ್ರಯಾಣಿಕರಿಗೆ ಮಾಹಿತಿ ನೀಡುವ ಫಲಕಗಳಲ್ಲಿ ಇಂಗ್ಲೀಷ್, ಹಿಂದಿ ಭಾಷೆಗೆ ಒತ್ತು ನೀಡಲಾಗಿದೆ. ಕನ್ನಡ ಭಾಷೆಯ ಕಡೆಗಣನೆ ಮಾಡಲಾಗಿದೆ.
ಹಾಗೆಯೇ ರಾಷ್ಟ್ರಕವಿ ಕುವೆಂಪು ವಿಮಾನ ನಿಲ್ದಾಣವೆಂಬ ನಾಮ ಫಲಕವು ನಿಲ್ದಾಣದ ಆವರಣದಲ್ಲಿ ಎಲ್ಲಿಯೂ ಕಾಣುತ್ತಿಲ್ಲ. ಕುವೆಂಪು ಹೆಸರಿನ ಫಲಕಗಳನ್ನು ಅಳವಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ತಕ್ಷಣವೇ ಕನ್ನಡ ಭಾಷೆಯ ಮಾಹಿತಿ ಹಾಗೂ ಕುವೆಂಪು ಹೆಸರಿನ ನಾಮಫಲಕಗಳ ಅಳವಡಿಕೆಗೆ ವಿಮಾನ ನಿಲ್ದಾಣ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಸಂಘಟನೆಯ ಅಧ್ಯಕ್ಷ ವಾಟಾಳ್ ಮಂಜುನಾಥ್, ಗೌರವಾಧ್ಯಕ್ಷ ಪ್ರಶಾಂತ್, ಕಾರ್ಯರ್ದಶಿ ನಿತಿನ್ ರೆಡ್ಡಿ, ಉಪಾಧ್ಯಕ್ಷ ರವಿ ಸಾಧುಶೆಟ್ಟಿ, ಯುವ ಘಟಕದ ಅಧ್ಯಕ್ಷ ಸತೀಶ್ ಗೌಡ, ಪ್ರಮುಖರಾದ ಆಲ್ಬರ್ಟ್ ವಿಜಯ್, ಪರಮೇಶ್, ಲೋಕೇಶ್, ಅಕ್ಬರ್ ಬಾಷಾ, ರಾಘವೇಂದ್ರ, ಜಾಹ್ನವಿ, ಅರ್ಚನಾ ನಿರಂಜನ್, ಮಂಜುನಾಥ್ ಮೊದಲಾದವರಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿದ್ದ ಆಕ್ರೋಶ!
*** ಶಿವಮೊಗ್ಗ ವಿಮಾನ ನಿಲ್ದಾಣದ ಡಿಜಿಟಲ್ ಮಾಹಿತಿ ಫಲಕದಲ್ಲಿ ಹಿಂದಿ ಭಾಷೆಗೆ ಒತ್ತು ನೀಡಲಾಗಿದ್ದು, ಕನ್ನಡ ಭಾಷೆ ಕಡೆಗಣಿಸಲಾಗಿದೆ ಎಂದು ಕೆಲ ಜಾಲತಾಣಿಗರು ಟ್ವಿಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಮೂಲಸೌಕರ್ಯ ಇಲಾಖೆ ಸಚಿವ ಎಂ.ಬಿ.ಪಾಟೀಲ್ ಅವರು ಗಮನಹರಿಸುವಂತೆ ಆಗ್ರಹಿಸಿದ್ದರು.‘ಇದು ನನ್ನ ಗಮನಕ್ಕೆ ಬಂದಿರಲಿಲ್ಲ. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡುವುದಾಗಿ’ ಸಚಿವ ಎಂ.ಬಿ.ಪಾಟೀಲ್ ಅವರು ಟ್ವೀಟ್ ಮಾಡಿದ್ದರು. ಜೊತೆಗೆ ‘ಕನ್ನಡ ಇನ್ ಕರ್ನಾಟಕ’ ಎಂಬ ಸಂದೇಶ ಹಾಕಿದ್ದರು.