
ದೇಶದ ಮೊಟ್ಟಮೊದಲ ಸೂರ್ಯ ಅಧ್ಯಯನದ ಆದಿತ್ಯಾ ಎಲ್ – 1 ಉಪಗ್ರಹದ ಯಶಸ್ವಿ ಉಡಾವಣೆ : ಇಸ್ರೋ ಸಂಸ್ಥೆಯ ಮತ್ತೊಂದು ಸಾಧನೆ!
ಶ್ರೀಹರಿಕೋಟಾ ( ಆಂಧ್ರಪ್ರದೇಶ), ಸೆ. 2 : ಇತ್ತೀಚೆಗಷ್ಟೆ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಲ್ಯಾಂಡರ್ ನ್ನು ಯಶಸ್ವಿಯಾಗಿ ಇಳಿಸಿ ಇಡೀ ವಿಶ್ವದ ಮೆಚ್ಚುಗೆಗೆ ಪಾತ್ರವಾಗಿರುವ ಭಾರತದ ಪ್ರತಿಷ್ಠಿತ ಬಾಹ್ಯಾಕಾಶ ಸಂಸ್ಥೆ ಇಸ್ರೋ ಸಂಸ್ಥೆಯು, ಇದೀಗ ದೇಶದ ಮೊಟ್ಟಮೊದಲ ಸೂರ್ಯ ಅಧ್ಯಯನ ಯೋಜನೆಯ ಆದಿತ್ಯಾ ಎಲ್ – 1 ಉಪಗ್ರಹವನ್ನು ಅತ್ಯಂತ ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಶನಿವಾರ ಬೆಳಿಗ್ಗೆ 11 ಗಂಟೆ 50 ನಿಮಿಷಕ್ಕೆ ಸರಿಯಾಗಿ ಆಂಧ್ರಪ್ರದೇಶ ರಾಜ್ಯದ ಶ್ರೀಹರಿಕೋಟಾದ ಸತೀಶ್ ಧವನ್ ಉಡಾವಣೆ ಕೇಂದ್ರದ ಲಾಂಚ್ ಪ್ಯಾಡ್ ನಿಂದ ಉಪಗ್ರಹ ಉಡಾವಣೆಗೊಳಿಸಲಾಗಿದೆ. ಆದಿತ್ಯ ಎಲ್ – 1 ಭಾರತದ ಮೊಟ್ಟಮೊದಲ ಸೌರ ಬಾಹ್ಯಾಕಾಶ ವೀಕ್ಷಣಾಲಯವಾಗಿದೆ. ಈ ಉಪಗ್ರಹವನ್ನು ಇಸ್ರೋದ ಪಿಎಸ್ಎಲ್’ವಿ – ಸಿ57 ಉಡಾವಣಾ ವಾಹಕದ ಮೂಲಕ ಉಡಾವಣೆ ಮಾಡಲಾಗುತ್ತಿದೆ.

ಆದಿತ್ಯ ಎಲ್ – 1 ಉಪಗ್ರಹವು ಸೂರ್ಯನ ವಿವರವಾದ ಅಧ್ಯಯನ ಮಾಡಲಿದೆ. ಸೂರ್ಯನು ಭೂಮಿಯಿಂದ 1.5 ಮಿಲಿಯನ್ ಕಿಮೀ ದೂರದಲ್ಲಿದ್ದು, ಈ ದೂರವನ್ನು ಆದಿತ್ಯಾ ಎಲ್ 1 ಉಪಗ್ರಹವು ಸುಮಾರು ನಾಲ್ಕು ತಿಂಗಳ ಅವಧಿಯಲ್ಲಿ ಕ್ರಮಿಸಿ ತನ್ನ ನಿಗದಿತ ಕಕ್ಷೆ ತಲುಪುವ ಸಾಧ್ಯತೆಯಿದೆ.

ಉಪಗ್ರಹವು ಏಳು ವಿಭಿನ್ನ ಪೇಲೋಡ್ ಗಳನ್ನು ಕೊಂಡೊಯ್ದಿದೆ. ಸೂರ್ಯನ ಬೆಳಕು ವಿಶ್ಲೇಷಣೆ, ಪ್ಲಾಸ್ಮಾ ಮತ್ತು ಕಾಂತೀಯ ಕ್ಷೇತ್ರಗಳ ಅಳೆಯುವ ಪೆಲೋಡ್ ಗಳಾಗಿವೆ. ಒಂದು ಪೆಲೋಡ್ ಪ್ರತಿ ನಿಮಿಷಕ್ಕೆ ಸೂರ್ಯನ ಒಂದು ಪೋಟೋ ಕ್ಲಿಕ್ಕಿಸಲಿದೆ. 24 ಗಂಟೆಗಳ ಅವಧಿಯಲ್ಲಿ 1440 ಪೋಟೋ ಕ್ಲಿಕ್ಕಿಸಿ, ನಿಯಂತ್ರಣ ಕೇಂದ್ರಕ್ಕೆ ರವಾನಿಸುವ ಸಾಮರ್ಥ್ಯ ಹೊಂದಿದ್ದಾಗಿದೆ. ಮಿಕ್ಕ 6 ಪೆಲೋಡ್ ಗಳು ಇನ್ನಿತರ ವೈಜ್ಞಾನಿಕ ಸಂಶೋಧನೆ ನಡೆಸಲಿವೆ.