
ಶಿವಮೊಗ್ಗ : ಕಾಶೀಪುರ ಫ್ಲೈ ಓವರ್ ನಲ್ಲಿ ವಾಹನಗಳ ಸಂಚಾರ ಆರಂಭ – ಕೊನೆ ಹಂತದ ಕಾಮಗಾರಿಗಳು ವಿಳಂಬ!
ಶಿವಮೊಗ್ಗ, ಸೆ. 5: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಕಳೆದ ಎರಡೂವರೆ ವರ್ಷಗಳ ಹಿಂದೆ ಶಿವಮೊಗ್ಗ ನಗರದ ಕಾಶೀಪುರ ರೈಲ್ವೆ ಗೇಟ್ ಬಳಿ ನಿರ್ಮಿಸಲಾಗುತ್ತಿದ್ದ ರೈಲ್ವೆ ಮೇಲ್ಸೇತುವೆ ಕಾಮಗಾರಿ ಅಂತಿಮ ಹಂತಕ್ಕೆ ಬಂದಿದ್ದು, ಕಳೆದ ಕೆಲ ದಿನಗಳಿಂದ ಫ್ಲೈ ಓವರ್ ಮೇಲೆ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ಇದರಿಂದ ರೈಲ್ವೇ ಗೇಟ್ ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿ ಬಳಿ ತಲೆದೋರುತ್ತಿದ್ದ ಟ್ರಾಫಿಕ್ ಕಿರಿಕಿರಿಗೆ ಕಡಿವಾಣ ಬಿದ್ದಿದೆ. ಪ್ರಸ್ತುತ ಸೇತುವೆಗೆ ಬಣ್ಣ ಹಚ್ಚುವ, ಬೀದಿ ದೀಪಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ಇತರೆ ಸಣ್ಣಪುಟ್ಟ ಕಾಮಗಾರಿಗಳು ನಡೆಯುತ್ತಿವೆ.

ಆದರೆ ಕೊನೆ ಹಂತದ ಕೆಲಸಕಾರ್ಯಗಳು ವಿಳಂಬಗತಿಯಲ್ಲಿ ಸಾಗುತ್ತಿರುವ ದೂರುಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

ಈಗಾಗಲೇ ಸಮೀಪದ ವೀರಣ್ಣನ ಲೇಔಟ್ ಬಳಿಯ ರೈಲ್ವೆ ಹಳಿಗೆ ನಿರ್ಮಿಸಲಾಗಿದ್ದ ಕೆಳ ಸೇತುವೆಯನ್ನು ಇತ್ತೀಚೆಗಷ್ಟೆ ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು.

ಅದರಂತೆ ಕಾಶೀಪುರ ರೈಲ್ವೆ ಗೇಟ್ ಬಳಿಯ ಮೇಲ್ಸೇತುವೆಯ ಎರಡು ಬದಿ ಬಾಕಿಯಿರುವ ಡಾಂಬರೀಕರಣ ಕಾರ್ಯ ನಡೆಸಬೇಕು.

ಕಾಲಮಿತಿಯೊಳಗೆ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ನಾಗರೀಕರು ಆಗ್ರಹಿಸುತ್ತಾರೆ.