
ಶಿವಮೊಗ್ಗ : ಅರಣ್ಯ ಇಲಾಖೆ ಬೋನಿಗೆ ಬಿದ್ದ ಹೆಣ್ಣು ಚಿರತೆ!
ಶಿವಮೊಗ್ಗ, ಸೆ. 6: ಶಿವಮೊಗ್ಗ ತಾಲೂಕಿನ ಗೆಜ್ಜೇನಹಳ್ಳಿ ಗ್ರಾಮದ ಹೊರವಲಯದ ಅರಣ್ಯ ಪ್ರದೇಶದ ಜಮೀನುಗಳ ಬಳಿ ಇತ್ತೀಚೆಗೆ ಕಾಣಿಸಿಕೊಂಡು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದ ಹೆಣ್ಣು ಚಿರತೆಯೊಂದು ಅರಣ್ಯ ಇಲಾಖೆಯಿಟ್ಟಿದ್ದ ಬೋನಿಗೆ ಬಿದ್ದ ಘಟನೆ ಮಂಗಳವಾರ ಮುಂಜಾನೆ ನಡೆದಿದೆ.
ಬೋನಿಗೆ ಬಿದ್ದಿರುವ ಚಿರತೆಗೆ ಸರಿಸುಮಾರು 4 ರಿಂದ 5 ವರ್ಷ ವಯೋಮಾನವಿದೆ. ಕಳೆದ ಹಲವು ದಿನಗಳಿಂದ ಚಿರತೆಯು ಸಮೀಪದ ಹೊಲಗದ್ದೆಗಳ ಬಳಿ ಓಡಾಡಿಕೊಂಡಿತ್ತು. ಕಳೆದ ಕೆಲ ದಿನಗಳ ಹಿಂದೆ ಜಮೀನಿನ ಮನೆಯೊಂದರ ಬಳಿಯಿದ್ದ ನಾಯಿಯನ್ನು ಬೇಟೆಯಾಡಿ ಸಾಯಿಸಿತ್ತು.
ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ಚಿರತೆ ಸೆರೆಗಾಗಿ ಅದು ಓಡಾಡುವ ಸ್ಥಳದಲ್ಲಿ ಬೋನಿಟ್ಟಿತ್ತು. ಸ್ಥಳಕ್ಕೆ ಶಂಕರ ಅರಣ್ಯ ವಲಯದ ಆರ್.ಎಫ್.ಓ ಸುಧಾಕರ್ ಮತ್ತವರ ಸಿಬ್ಬಂದಿಗಳು ಭೇಟಿ ನೀಡಿದ್ದರು.
‘ಕಳೆದ ಹಲವು ತಿಂಗಳುಗಳಿಂದ ಜಮೀನುಗಳ ಸುತ್ತಮುತ್ತ ಚಿರತೆಗಳು ಓಡಾಡುತ್ತಿದ್ದವು. ಈ ಕುರಿತಂತೆ ಅರಣ್ಯ ಇಲಾಖೆ ಗಮನಕ್ಕೆ ತಂದರೂ ಗಮನಹರಿಸಿರಲಿಲ್ಲ. ನಾಯಿಗಳನ್ನು ಬೇಟೆಯಾಡಿ ಸಾಯಿಸಿದ ನಂತರ, ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಬೋನಿಟ್ಟು ಚಿರತೆ ಸೆರೆ ಹಿಡಿದಿದೆ. ಇನ್ನೂ ಒಂದು ಚಿರತೆಯಿರುವ ಅನುಮಾನವಿದ್ದು, ಅರಣ್ಯ ಇಲಾಖೆ ಸೂಕ್ತ ಗಮನಹರಿಸಬೇಕು’ ಎಂದು ಗೆಜ್ಜೇನಹಳ್ಳೀ ಗ್ರಾಮ ಪಂಚಾಯ್ತಿ ಸದಸ್ಯ ದೂದ್ಯನಾಯ್ಕ್ ಅವರು ಆಗ್ರಹಿಸಿದ್ದಾರೆ.