
ಶಿವಮೊಗ್ಗ : ಕಾಮಗಾರಿ ಪೂರ್ಣಗೊಂಡು ತಿಂಗಳುಗಳೇ ಉರುಳಿದರೂ ವಾಹನಗಳ ಸಂಚಾರಕ್ಕೆ ಮುಕ್ತವಾಗದ ಸೇತುವೆ!
ಶಿವಮೊಗ್ಗ, ಸೆ. 9: ಶಿವಮೊಗ್ಗದ ಸಹ್ಯಾದ್ರಿ ನಗರ ಬಡಾವಣೆ ಸಮೀಪ ಹಾದು ಹೋಗಿರುವ ರಾಜ್ಯ ಹೆದ್ದಾರಿಗೆ ನಿರ್ಮಿಸಲಾಗುತ್ತಿದ್ದ ಸೇತುವೆ ಕಾಮಗಾರಿ ಪೂರ್ಣಗೊಂಡು ಸುಮಾರು ಎರಡು ತಿಂಗಳಾಗುತ್ತಿದೆ. ಆದರೆ ಇಲ್ಲಿಯವರೆಗೂ ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸದೆ ನಿರ್ಲಕ್ಷ್ಯವಹಿಸಲಾಗಿದೆ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.
ಸದರಿ ಸ್ಥಳದ ಹೆದ್ದಾರಿಯಲ್ಲಿ ಈ ಹಿಂದೆ ಶಿಥಿಲಾವಸ್ಥೆಯಲ್ಲಿದ್ದ ಸೇತುವೆಯನ್ನು ನೆಲಸಮಗೊಳಿಸಿ, ಅದೇ ಸ್ಥಳದಲ್ಲಿ ಹೊಸ ಸೇತುವೆ ನಿರ್ಮಿಸಲಾಗುತ್ತಿದೆ. ಕರ್ನಾಟಕ ರಸ್ತೆ ಅಭಿವೃದ್ದಿ ನಿಗಮ ನಿಯಮಿತ (ಕೆ.ಆರ್.ಡಿ.ಸಿ.ಎಲ್) ವು ಸೇತುವೆ ನಿರ್ಮಾಣ ಕಾರ್ಯದ ಜವಾಬ್ದಾರಿ ನಿರ್ವಹಿಸುತ್ತಿದೆ.
‘ಈಗಾಗಲೇ ಸೇತುವೆ ನಿರ್ಮಾಣದ ಬಹುತೇಕ ಕಾಮಗಾರಿ ಪೂರ್ಣಗೊಂಡು, ಸರಿಸುಮಾರು ಎರಡು ತಿಂಗಳಾಗುತ್ತ ಬಂದಿದೆ. ಬಣ್ಣ ಬಳಿಯುವುದು, ರಸ್ತೆಯ ಎರಡು ಬದಿ ಬಿದ್ದಿರುವ ಕಲ್ಲುಮಣ್ಣಿನ ರಾಶಿ ತೆರವುಗೊಳಿಸಿ ಡಾಂಬರ್ ಹಾಕುವ ಕಾರ್ಯ ಸೇರಿದಂತೆ ಸಣ್ಣಪುಟ್ಟ ಕೆಲಸಕಾರ್ಯಗಳು ಮಾತ್ರ ಬಾಕಿಯಿದೆ.
ಆದರೆ ತಿಂಗಳುಗಳೇ ಉರುಳಿದರೂ ಕೆಲಸಗಳು ನಡೆಯುತ್ತಿಲ್ಲ. ವಾಹನ ಸಂಚಾರಕ್ಕೆ ಸೇತುವೆ ಮುಕ್ತಿಗೊಳಿಸಿಲ್ಲ. ತಕ್ಷಣವೇ ಸಂಬಂಧಿಸಿದ ಅಧಿಕಾರಿಗಳು ಬಾಕಿ ಉಳಿದಿರುವ ಸೇತುವೆ ನಿರ್ಮಾಣ ಕಾರ್ಯ ಪೂರ್ಣಗೊಳಿಸಿ, ಸುಗಮ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ವಾಹನ ಸವಾರರು ಹಾಗೂ ಸ್ಥಳೀಯ ನಿವಾಸಿಗಳು ಆಗ್ರಹಿಸುತ್ತಾರೆ.