
ಶಿವಮೊಗ್ಗ : ಪಾಳು ಬೀಳುತ್ತಿರುವ ಸಂತೆ ಮಾರುಕಟ್ಟೆ ಕಟ್ಟಡ – ಗಮನಹರಿಸುವುದೆ ಮಹಾನಗರ ಪಾಲಿಕೆ ಆಡಳಿತ?
ಶಿವಮೊಗ್ಗ, ಸೆ. 7: ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿ 27 ನೇ ವಾರ್ಡ್ ಮಿಳಘಟ್ಟದ ಕೆ.ಎಸ್.ಆರ್.ಟಿ.ಸಿ ಡಿಪೋ ಸಮೀಪ, ಕೋಟ್ಯಾಂತರ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಸಂತೆ ಮಾರುಕಟ್ಟೆ ಕಟ್ಟಡವು ಪಾಳು ಬೀಳಲಾರಂಭಿಸಿದೆ. ಅನೈತಿಕ ಚಟುವಟಿಕೆಗಳ ತಾಣವಾಗಲಾರಂಭಿಸಿದೆ.
ಖಾಸಗಿ ಬಸ್ ನಿಲ್ದಾಣ ಸಮೀಪದ ಮಿಳಘಟ್ಟ ಮುಖ್ಯ ರಸ್ತೆಯಲ್ಲಿ ಪ್ರತಿ ಮಂಗಳವಾರ ನಡೆಯುವ ಸಂತೆಯನ್ನು, ಸದರಿ ಕಟ್ಟಡಕ್ಕೆ ಸ್ಥಳಾಂತರಿಸಬೇಕಾಗಿದೆ. ಆದರೆ ವಿಳಂಬಗತಿಯ ಕಾಮಗಾರಿ, ಪಾಲಿಕೆ ಆಡಳಿತದ ನಿರ್ಲಕ್ಷ್ಯ ಧೋರಣೆಯಿಂದ ಇಲ್ಲಿಯವರೆಗೂ ಕಟ್ಟಡ ಕಾರ್ಯಾರಂಭಗೊಂಡಿಲ್ಲ.

ಸದ್ಯ ಕೆ.ಎಸ್.ಆರ್.ಟಿ.ಸಿ ಡಿಪೋ ಕ್ವಾಟರ್ಸ್ ಪಕ್ಕದ ಕಟ್ಟಡವು ರಾತ್ರಿ ವೇಳೆ ಮದ್ಯ ವ್ಯಸನಿಗಳ ಹಾಗೂ ಅನೈತಿಕ ಚಟುವಟಿಕೆಗಳ ತಾಣವಾಗುತ್ತಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸುತ್ತಾರೆ.
ಸ್ಥಳಾಂತರವಾಗಬೇಕು: ಮಿಳಘಟ್ಟ ಮುಖ್ಯ ರಸ್ತೆಯಲ್ಲಿ ನಡೆಯುವ ಸಂತೆಯಿಂದ, ಜನ – ವಾಹನ ಸಂಚಾರಕ್ಕೆ ತೀವ್ರ ಅಡೆತಡೆಯಾಗಿ ಪರಿಣಮಿಸುತ್ತಿದೆ. ಅಪಘಾತಗಳು ಸಂಭವಿಸುತ್ತಿವೆ. ಸಾರ್ವಜನಿಕರಿಗೆ ತೀವ್ರ ಕಿರಿಕಿರಿಯಾಗುತ್ತಿದೆ ಎಂಬ ಕಾರಣದಿಂದ ಸಂತೆ ಸ್ಥಳಾಂತರಕ್ಕೆ ಪಾಲಿಕೆ ಆಡಳಿತ ನಿರ್ಧರಿಸಿತ್ತು.

ಕೆ.ಎಸ್.ಆರ್.ಟಿ.ಸಿ. ಡಿಪೋ ಸಮೀಪವಿದ್ದ ಪಾಲಿಕೆ ಜಾಗದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಿ ಸಂತೆ ಮಾರುಕಟ್ಟೆ ಸ್ಥಾಪನೆಗೆ ನಿರ್ಧರಿಸಿತ್ತು. ಅದರಂತೆ ಸರಿಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಕಾರ್ಯ ನಡೆಸಲಾಗಿದೆ. ಆದರೆ ವರ್ಷಗಳೇ ಉರುಳಿದರೂ ಇಲ್ಲಿಯವರೆಗೂ ಕಟ್ಟಡ ಕಾರ್ಯಾರಂಭಗೊಂಡಿಲ್ಲ.
‘ಕಾಲಮಿತಿಯೊಳಗೆ ಕ್ರಮಕೈಗೊಳ್ಳಲು ಸೂಚಿಸಿದ್ದೆನೆ’ : ಕಾರ್ಪೋರೇಟರ್ ವಿಶ್ವನಾಥ್
‘ತಮ್ಮ ವಾರ್ಡ್ ನಲ್ಲಿ ನಿರ್ಮಿಸಲಾಗುತ್ತಿರುವ ಸಂತೆ ಮಾರುಕಟ್ಟೆ ಕಟ್ಟಡ ಕಾರ್ಯಾರಂಭಕ್ಕೆ ಕಾಲಮಿತಿಯೊಳಗೆ ಕ್ರಮಕೈಗೊಳ್ಳುವಂತೆ ಈಗಾಗಲೇ ಪಾಲಿಕೆ ಆಯುಕ್ತರಿಗೆ ಮನವಿ ಮಾಡಿದ್ದೆನೆ’ ಎಂದು 27 ನೇ ವಾರ್ಡ್ ಕಾರ್ಪೋರೇಟರ್ ವಿಶ‍್ವನಾಥ‍್ ಅವರು ತಿಳಿಸಿದ್ದಾರೆ. ಗುರುವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ತಮ್ಮ ಅಧಿಕಾರವಧಿಯೊಳಗೆ ಸಂತೆ ಮಾರುಕಟ್ಟೆ ಆರಂಭಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ವಿಶ್ವನಾಥ‍್ ಅವರು ತಿಳಿಸಿದ್ದಾರೆ.