
ಸರ್ವರ್ ಡೌನ್ ಸಮಸ್ಯೆ : ಬಿಪಿಎಲ್ ಕಾರ್ಡ್ ತಿದ್ದುಪಡಿಗೆ ನಾಗರೀಕರ ಹರಸಾಹಸ!
ವರದಿ : ಬಿ. ರೇಣುಕೇಶ್
ಶಿವಮೊಗ್ಗ, ಸೆ. 8: ಸರಿಸುಮಾರು ಒಂದು ವರ್ಷದ ನಂತರ, ಬಿಪಿಎಲ್ (ಬಡತನ ರೇಖೆಗಿಂತ ಕೆಳಗಿನ) ಪಡಿತರ ಚೀಟಿಯಲ್ಲಿ ಹೊಸದಾಗಿ ಕುಟುಂಬ ಸದಸ್ಯರ ಸೇರ್ಪಡೆ ಹಾಗೂ ಮಾಹಿತಿ ತಿದ್ದುಪಡಿಗೆ ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದೆ. ಆದರೆ ಸರ್ವರ್ ಡೌನ್ ಸಮಸ್ಯೆಯಿಂದ ಪಡಿತರ ಚೀಟಿ ತಿದ್ದುಪಡಿ ಮಾಡಲು ಸಾಧ್ಯವಾಗದೆ ನಾಗರೀಕರು ಪರಿತಪಿಸುತ್ತಿದ್ದಾರೆ. ಇನ್ನಿಲ್ಲದ ಸಂಕಷ್ಟ ಪಡುತ್ತಿದ್ದಾರೆ!
ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆಗಳ ಅನುಷ್ಠಾನದ ನಂತರ, ಹೊಸದಾಗಿ ಬಿಪಿಎಲ್ ಪಡಿತರ ಚೀಟಿ ವಿತರಣೆ ಹಾಗೂ ತಿದ್ದುಪಡಿಗೆ ಅವಕಾಶ ಕಲ್ಪಿಸಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿಬಂದಿತ್ತು. ಆದರೆ ಸರ್ಕಾರವು ಬಿಪಿಎಲ್ ಪಡಿತರ ಚೀಟಿಯ ತಿದ್ದುಪಡಿಗೆ ಮಾತ್ರ ಅವಕಾಶ ಕಲ್ಪಿಸಿತ್ತು.
ಅದರಂತೆ ಪಡಿತರ ಚೀಟಿಯಲ್ಲಿ ಹೊಸದಾಗಿ ಸದಸ್ಯರ ಸೇರ್ಪಡೆ, ಲೋಪದೋಷ ಸರಿಪಡಿಸಲು, ವಿಳಾಸ ಬದಲಾವಣೆ ಮತ್ತೀತರ ತಿದ್ದುಪಡಿಗೆ ಸೆಪ್ಟೆಂಬರ್ 1 ರಿಂದ ಸೀಮಿತಾವಧಿಗೆ ಆನ್’ಲೈನ್ ನಲ್ಲಿ ಅವಕಾಶ ಕಲ್ಪಿಸಿತ್ತು. ಹಲವು ತಿಂಗಳುಗಳ ನಂತರ ಲಭ್ಯವಾದ ಅವಕಾಶ ಸದುಪಯೋಗಕ್ಕೆ ನಾಗರೀಕರು ಮುಂದಾಗಿದ್ದರು.
ಆದರೆ ಆಹಾರ ಇಲಾಖೆಯ ವೆಬ್ ಸೈಟ್ ನಲ್ಲಿ ಸರ್ವರ್ ಡೌನ್ ಸಮಸ್ಯೆ ಎದುರಾಗಿತ್ತು. ನಿಗದಿತ ಪುಟ ತೆರೆದುಕೊಳ್ಳುತ್ತಿರಲಿಲ್ಲ. ಇದರಿಂದ ಕೆಲ ನಾಗರೀಕರು ತಮ್ಮ ಕೆಲಸಕಾರ್ಯ ಬಿಟ್ಟು ಸೈಬರ್ ಶಾಪ್, ನಾಗರೀಕ ಸೇವಾ ಕೇಂದ್ರಗಳ ಮುಂಭಾಗ ಗಂಟೆಗಟ್ಟಲೆ ಬೀಡುಬಿಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ವರ್ ಡೌನ್ ಸಮಸ್ಯೆ ಪರಿಹಾರಕ್ಕಾಗಿ, ರಾಜ್ಯ ಸರ್ಕಾರವು ಜಿಲ್ಲೆಗಳಿಗೆ ಮೂರು ಪ್ರತ್ಯೇಕ ದಿನಗಳ ನಿಗದಿ ಮಾಡಿತ್ತು.
ಅದರಂತೆ ಶಿವಮೊಗ್ಗ ಸೇರಿದಂತೆ ಇತರೆ ಕೆಲ ಜಿಲ್ಲೆಗಳ ನಾಗರೀಕರಿಗೆ ಸೆ. 6, 7 ಹಾಗೂ 8 ರವರೆಗೆ ಕಾರ್ಡ್ ತಿದ್ದುಪಡಿಗೆ ಅವಕಾಶ ಕಲ್ಪಿಸಿತ್ತು. ಆದರೆ ಸರ್ವರ್ ಡೌನ್ ಸಮಸ್ಯೆಯಿಂದ ಸಾಕಷ್ಟು ಸಂಖ್ಯೆಯ ನಾಗರೀಕರು ತಮ್ಮ ಬಿಪಿಎಲ್ ಪಡಿತರ ಚೀಟಿ ತಿದ್ದುಪಡಿ ಮಾಡಿಸಲು ಸಾಧ್ಯವಾಗಿಲ್ಲ ಎಂಬ ಮಾಹಿತಿಗಳು ಕೇಳಿಬರುತ್ತಿವೆ.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಬಿಪಿಎಲ್ ಪಡಿತರ ಚೀಟಿ ತಿದ್ದುಪಡಿಗೆ ನೀಡಿರುವ ಕಾಲಾವಕಾಶ ವಿಸ್ತರಣೆ ಮಾಡಬೇಕು. ಸರ್ವರ್ ಸಮಸ್ಯೆ ಎದುರಾಗದಂತೆ ಸೂಕ್ತ ತಾಂತ್ರಿಕ ವ್ಯವಸ್ಥೆಗಳನ್ನು ಮಾಡಬೇಕು ಎಂದು ನಾಗರೀಕರು ಆಗ್ರಹಿಸುತ್ತಾರೆ.