
‘ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕದಿದ್ದರೆ ಡಿಸಿಪಿ – ಎಸ್ಪಿಗಳ ವಿರುದ್ಧ ಕ್ರಮ!’ : ಸಿಎಂ ಸಿದ್ದರಾಮಯ್ಯ ಎಚ್ಚರಿಕೆ
ಬೆಂಗಳೂರು ಸೆ.15: ‘ಆಯಾ ಠಾಣಾ ವ್ಯಾಪ್ತಿಗಳಲ್ಲಿ ಅಕ್ರಮ ಚಟುವಟಿಕೆಗಳು, ಕಾನೂನು ಬಾಹಿರ ಸಂಘಟಿತ ಅಪರಾಧಗಳು ನಡೆಯುತ್ತಿದ್ದರೆ ಡಿಸಿಪಿ, ಎಸ್.ಪಿ. ಮಟ್ಟದ ಅಧಿಕಾರಿಗಳನ್ನೇ ಹೊಣೆ ಮಾಡಿ ಸರ್ಕಾರ ಕ್ರಮ ಕೈಗೊಳ್ಳಲಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶದಲ್ಲಿ ಪೊಲೀಸ್ ಅಧಿಕಾರಿಗಳಿಗೆ ನೀಡಿದ ಸೂಚನೆಗಳ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ನಮ್ಮ ಸರ್ಕಾರ ಕೇವಲ ಕೆಳ ಹಂತದ ಅಧಿಕಾರಿಗಳು, ಸಿಬ್ಬಂದಿ ವಿರುದ್ಧ ಕ್ರಮ ಕೈಗೊಂಡು ಕೈ ತೊಳೆದುಕೊಳ್ಳುವುದಿಲ್ಲ. ಹಿರಿಯ ಅಧಿಕಾರಿಗಳ ಮೇಲೂ ಕ್ರಮ ಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಸುಳ್ಳು ಸುದ್ದಿ, ವದಂತಿಗಳ ಮೂಲಕ ಸಮಾಜದ ಶಾಂತಿ ಕದಡುವವರ ವಿರುದ್ಧ ಸ್ವಯಂಪ್ರೇರಿತ ಎಫ್ ಐ ಆರ್ ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕು. ಸೂಕ್ಷ್ಮ ಪ್ರಕರಣಗಳಲ್ಲಿ ದೂರು ಕೊಡುವವರು ಬರಲಿ ಎಂದು ಕಾಯುತ್ತಾ ಕೂರಬಾರದು ಎನ್ನುವ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದರು.
ಸಿಸಿಬಿಯನ್ನು ಇನ್ನಷ್ಟು ಸದೃಢಗೊಳಿಸಲು 230 ಸಿಬ್ಬಂದಿಯನ್ನು ಹೊಸದಾಗಿ ನೇಮಿಸಿಕೊಳ್ಳಲು ಒಪ್ಪಿಗೆ ನೀಡಲಾಗಿದೆ. ಸಿಬ್ಬಂದಿಗೆ ಅಗತ್ಯವಾದರೆ ಹೊಸ ಕಟ್ಟಡಗಳನ್ನು ಒದಗಿಸಲಾಗುವುದು ಎಂದರು.
ಹಿರಿಯ ಅಧಿಕಾರಿಗಳು ಜನ ಸಂಪರ್ಕಕ್ಕೆ ಸಿಗದೇ ಹೋದರೆ, ಜನ ಸ್ನೇಹಿ ಆಗದೇ ಹೋದರೆ ಅಂತಹ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಅನೈತಿಕ ಪೊಲೀಸ್ ಗಿರಿ ವಿಚಾರದಲ್ಲಿ ಸರ್ಕಾರ zero tolarence ವಹಿಸಲಿದೆ ಎಂದು ಸ್ಪಷ್ಟ ಮಾತುಗಳಲ್ಲಿ ಎಚ್ಚರಿಸಿದರು.
ಗೃಹ ಸಚಿವರಾದ ಜಿ.ಪರಮೇಶ್ವರ್, ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್, ನಗರ ಪೊಲೀಸ್ ಆಯುಕ್ತರಾದ ದಯಾನಂದ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಗೋಷ್ಠಿಯಲ್ಲಿದ್ದರು.
*ಗೋಷ್ಠಿಯ ಮುಖ್ಯಾಂಶಗಳು*
👉 ಠಾಣಾಧಿಕಾರಿಗಳ ಗಮನಕ್ಕೆ ಬರದಂತೆ ಯಾವ ಅಪರಾಧಗಳೂ, ಕರಾಳ ದಂಧೆಗಳೂ ನಡೆಯಲು ಸಾಧ್ಯವಿಲ್ಲ
👉 ಹಿರಿಯ ಅಧಿಕಾರಿಗಳು ಠಾಣೆಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸುವುದು ಕಡ್ಡಾಯ
👉 ಪೊಲೀಸರು ದರ್ಪ ಬಿಟ್ಟು ಜನಸ್ನೇಹಿಯಾಗಿ ಕೆಲಸ ಮಾಡಬೇಕು
👉 ಠಾಣೆಗೆ ಬರುವ ಬಡವರು, ಜನಸಾಮಾನ್ಯರಿಗೆ ಪೊಲೀಸ್ ವ್ಯವಸ್ಥೆ ಬಗ್ಗೆ ಭರವಸೆ ಹುಟ್ಟುವ ರೀತಿಯಲ್ಲಿ ಜನ ಸ್ನೇಹಿ ಪೊಲೀಸ್ ವ್ಯವಸ್ಥೆ ರೂಪಿಸಿ