
ಸೆ. 17 ರಿಂದ ಅಕ್ಟೋಬರ್ 1 ರವರೆಗೆ ಶಿವಮೊಗ್ಗ ಜಿಲ್ಲೆಯಾದ್ಯಂತ ಬೈಕ್ ರ್ಯಾಲಿ ನಿಷೇಧ!
ಶಿವಮೊಗ್ಗ, ಸೆ. 16: ಶಿವಮೊಗ್ಗ ಜಿಲ್ಲೆಯಾದ್ಯಂತ ಸೆ. 17 ರಿಂದ ಅಕ್ಟೋಬರ್ 1 ರವರೆಗೆ ಬೈಕ್ ರ‌್ಯಾಲಿ ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರು ಆದೇಶ ಹೊರಡಿಸಿದ್ದಾರೆ.

ಈ ಕುರಿತಂತೆ ಶನಿವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.18-09-2023 ರಿಂದ ಗಣೇಶ ಹಬ್ಬ ಮತ್ತು ದಿನಾಂಕ: 28-09-2023 ರಿಂದ 30-09-2023 ರವರೆಗೆ ಈದ್ ಮಿಲಾದ್ ಹಬ್ಬಗಳ ಆಚರಣೆಗಳಿವೆ.
ಜಿಲ್ಲೆಯು ಸೂಕ್ಷ್ಮತೆಯಿಂದ ಕೂಡಿರುವ ಪ್ರದೇಶವಾಗಿರುವುದರಿಂದ ಜಿಲ್ಲಾ ಪೊಲೀಸ್ ಅಧೀಕ್ಷಕರ ಶಿಫಾರಸ್ಸಿನ ಮೇರೆಗೆ ಜಿಲ್ಲೆಯಾದ್ಯಂತ ಕಾನೂನು ಸುವ್ಯವಸ್ಥೆ, ಸೌಹಾರ್ದತೆ ಮತ್ತು ಶಾಂತಿ ಕಾಪಾಡುವ ನಿಟ್ಟಿನಲ್ಲಿ 17-09-2023 ರಿಂದ 01-10-2023 ರವರೆಗೆ ಜಿಲ್ಲೆಯಾದ್ಯಂತ ಬೈಕ್ ರ‌್ಯಾಲಿ ನಡೆಸುವುದನ್ನು ನಿಷೇಧಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ತಿಳಿಸಿದ್ದಾರೆ.
ಗಣೇಶ ಮೂರ್ತಿ ವಿಸರ್ಜನೆ ವೇಳೆ ತೆಪ್ಪ ಬಳಕೆ : ನಿಯಮ ಪಾಲನೆ ಕಡ್ಡಾಯ!
ಶಿವಮೊಗ್ಗ, ಸೆ. 16: ಗಣಪತಿ ವಿಸರ್ಜನೆ ಮಾಡಲು ತೆಪ್ಪ ಬಳಸುವ ವೇಳೆ, ಕಡ್ಡಾಯವಾಗಿ ಜಿಲ್ಲಾಡಳಿತದ ನಿಯಮ ಪಾಲಿಸುವಂತೆ ಡಿಸಿ ಡಾ.ಆರ್.ಸೆಲ್ವಮಣಿ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಈ ಕುರಿತಂತೆ ಶನಿವಾರ ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಹೊಳೆ, ನದಿ, ಕೆರೆಗಳು, ಹಿನ್ನೀರು ಪ್ರದೇಶದಲ್ಲಿ ಗಣೇಶಮೂರ್ತಿ ವಿಸರ್ಜಿಸಲು ತೆಪ್ಪ ಬಳಕೆ ಮಾಡಿದಲ್ಲಿ, ಮೂರರಿಂದ ನಾಲ್ಕು ಜನರು ಮಾತ್ರ ತೆಪ್ಪ ಬಳಸಬೇಕು ಎಂದು ಆದೇಶಿಸಿದ್ದಾರೆ.
ಹಾಗೆಯೇ ಕಡ್ಡಾಯವಾಗಿ ತೆಪ್ಪದಲ್ಲಿ ತೆರಳುವವರು ಲೈಫ್ ಜಾಕೆಟ್ ಧರಿಸಬೇಕು. ನುರಿತ ಈಜುಗಾರರು ಇದ್ದು, ಗಣಪತಿಮೂರ್ತಿ ವಿಸರ್ಜನೆ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ತೆಪ್ಪದ ಮೂಲಕ ಗಣೇಶ ವಿಸರ್ಜನೆ ಮಾಡುವ ವೇಳೆ ಸಂಭವಿಸಬಹುದಾದ ದುರ್ಘಟನೆಗಳನ್ನು ತಪ್ಪಿಸಲು ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರ ಶಿಫಾರಸ್ಸಿನ ಮೇರೆಗೆ, ಮುಂಜಾಗ್ರತ ಕ್ರಮವಾಗಿ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ನಗರ ಹಾಗೂ ಜಿಲ್ಲಾ ವ್ಯಾಪ್ತಿಯಲ್ಲಿ ಗಣೇಶ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ತೆಪ್ಪ ಬಳಕೆ ಮಾಡುವವರು ನಿಯಮಗಳ ಕಟ್ಟುನಿಟ್ಟಿನ ಪಾಲನೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.
ಗಣೇಶ ವಿಸರ್ಜನೆ – ಈದ್ಮಿಲಾದ್ ಆಚರಣೆ ವೇಳೆ ಡಿ.ಜೆ.ಸಿಸ್ಟಂ ಬಳಕೆ ನಿಷೇಧ

ಶಿವಮೊಗ್ಗ ಸೆ.16: ಸೆ.18 ರಂದು ಗಣೇಶ ಚತುರ್ಥಿ ಹಬ್ಬದ ಆಚರಣೆ ಪ್ರಯುಕ್ತ ವಿವಿಧ ದಿನಾಂಕಗಳಂದು ಗಣೇಶ ವಿಸರ್ಜನೆ ವೇಳೆ ಮುಂಜಾಗ್ರತ ಕ್ರಮವಾಗಿ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಸೆ. 18ರಿಂದ ಗಣೇಶೋತ್ಸವ ಆಚರಣೆಗಳು ಪೂರ್ಣಗೊಳ್ಳುವವರೆಗೆ ಹಾಗೂ ಸೆ. 28 ರಿಂದ ಸೆ. 30 ರವರೆಗೆ ಈದ್ ಮಿಲಾದ್ ಹಬ್ಬದ ಆಚರಣೆಗಳು ಪೂರ್ಣಗೊಳ್ಳುವವರೆಗೆ ಶಿವಮೊಗ್ಗ ಜಿಲ್ಲೆಯಾದ್ಯಂತ ಡಿ.ಜೆ ಸಿಸ್ಟಂ ಬಳಕೆ ನಿಷೇಧಗೊಳಿಸಿ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಆರ್. ಆದೇಶಿಸಿದ್ದಾರೆ.