ರೈಲ್ವೆ ಇಲಾಖೆಯಿಂದ ಜಾಗೃತಿ ಅಭಿಯಾನ

ಭದ್ರಾವತಿ, ಫೆ. 7: ಭದ್ರಾವತಿ ಸಮೀಪದ ಕಡದಕಟ್ಟೆಯ ಕೆಜಿಆರ್ ಗ್ರಾಮಾಂತರ ಹಿರಿಯ ಪ್ರಾಥಮಿಕ ಶಾಲೆ(ಅನುದಾನಿತ) ಮತ್ತು ನವಚೇತನ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಇಂದು ಶಿವಮೊಗ್ಗ ರೈಲ್ವೆ ಇಲಾಖೆ ವತಿಯಿಂದ ಸುರಕ್ಷಿತ ರೈಲ್ವೆ ಪ್ರಯಾಣ ಹಾಗೂ ರೈಲ್ವೆ ಕಾಯ್ದೆ ಕುರಿತು ಜಾಗೃತಿ ಅಭಿಯಾನ ಏರ್ಪಡಿಸಲಾಗಿತ್ತು.

ಶಿವಮೊಗ್ಗ ಆರ್.ಪಿ.ಎಫ್ ಇನ್ಸ್‌ಪೆಕ್ಟರ್ ಬಿ.ಎನ್.ಕುಬೇರಪ್ಪ ಹಾಗೂ ಸಬ್ ಇನ್ಸ್‌ಪೆಕ್ಟರ್ ಸಂತೋಷ್ ಎಸ್ ಗಾವಕರ್ ಹಾಗೂ ಸಿಬ್ಬಂದಿ ವರ್ಗದವರು ಜಾಗೃತಿ ಅಭಿಯಾನ ನಡೆಸಿಕೊಟ್ಟರು. ಪಿಎ ಸಿಸ್ಟಂ ಮತ್ತು ಟಿವಿ ಪ್ರದರ್ಶಕಗಳ ಮೂಲಕ ವಿದ್ಯಾರ್ಥಿಗಳಿಗೆ ಕಲ್ಲು ತೂರಾಟ, ರೈಲ್ವೆ ಹಳಿ ಅತಿಕ್ರಮಣ, ರೈಲ್ವೆ ಹಳಿಯಲ್ಲಿ ಸೆಲ್ಫಿ ತೆಗೆದುಕೊಳ್ಳುವುದರ ಪರಿಣಾಮ, ಜಾನುವಾರುಗಳ ಅಪಘಾತ, ಆತ್ಮಹತ್ಯೆ ಮತ್ತು ಫುಟ್ ಬೋರ್ಡ್‍ಗಳಲ್ಲಿ ಪ್ರಯಾಣಿಸುವುದರಿಂದ ಆಗುವ ಅವಘಡಗಳು ಇತ್ಯಾದಿಗಳ ಗಂಭೀರತೆಗಳ ಬಗ್ಗೆ ತಿಳುವಳಿಕೆ ನೀಡಲಾಯಿತು.

ರೈಲ್ವೇ ಕಾಯ್ದೆಯಡಿ ಬರುವ ಅಪರಾಧಗಳು ಹಾಗೂ ಶಿಕ್ಷೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟ ಅವರು ಎಲ್‍ಸಿ ಗೇಟ್‍ಗಳನ್ನು ಹಾದುಹೋಗುವಾಗ ಎಲ್ಲರೂ ನಿಯಮಗಳನ್ನು ಅನುಸರಿಸಬೇಕು. ಹಾಗೂ ರೈಲುಗಳ ಸುರಕ್ಷಿತ ಮತ್ತು ಸುಗಮ ಓಡಾಟಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಕೆಜಿಆರ್ ಗ್ರಾಮಾಂತರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಸುವರ್ಣ ಹೆಚ್.ಡಿ, ಶಿಕ್ಷಕರು, ಸಿಬ್ಬಂದಿಗಳು ಹಾಜರಿದ್ದರು.

Previous post ಸಾಗರದ ಇತಿಹಾಸ ಪ್ರಸಿದ್ಧ ಮಾರಿಕಾಂಬಾ ಜಾತ್ರೆಗೆ ಚಾಲನೆ..!
Next post ಮನೆಯಿಂದ ಮಗನೊಂದಿಗೆ ಕಣ್ಮರೆಯಾದ ತಾಯಿ..!