
ಭದ್ರಾ ಡ್ಯಾಂನಿಂದ ನಾಲೆಗಳಿಗೆ ನೀರು ಹರಿವು ಸ್ಥಗಿತಕ್ಕೆ ಒತ್ತಾಯಿಸಿ ರೈತ ಸಂಘದಿಂದ ಪ್ರತಿಭಟನೆ
ಭದ್ರಾವತಿ, ಸೆ. 19: ಭದ್ರಾ ಜಲಾಶಯದಿಂದ ನಾಲೆಗಳಿಗೆ ಹರಿಸಲಾಗುತ್ತಿರುವ ನೀರನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯು ಭದ್ರಾವತಿಯ ಮಿಲ್ಟ್ರಿ ಕ್ಯಾಂಪ್ ಬಳಿಯ ನೀರಾವರಿ ಇಲಾಖೆ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿತು.
6-9-2023 ರಂದು ನಡೆದ ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಸಭೆಯಲ್ಲಿ, ನೀರು ಹರಿಸಲು ಆಫ್ ಅಂಡ್ ಆನ್ ಪದ್ದತಿ ಅನುಸರಿಸಲು ತೀರ್ಮಾನಿಸಲಾಗಿತ್ತು. ಅದರಂತೆ 16-9-2023 ರಂದು ಡ್ಯಾಂನಿಂದ ಬಿಡಲಾಗುತ್ತಿದ್ದ ನೀರು ಸ್ಥಗಿತಗೊಳಿಸಬೇಕಾಗಿತ್ತು.
ಆದರೆ ಇಲ್ಲಿಯವರೆಗೂ ನೀರು ನಿಲ್ಲಿಸಿಲ್ಲ. ನೀರು ನಿಲ್ಲಿಸದ್ದಿದ್ದಾರೆ ಮುಂಬರುವ ಬೇಸಿಗೆ ವೇಳೆ, ನೀರಿನ ಕೊರತೆಯಿಂದ ಅಡಕೆ ತೋಟಗಳನ್ನು ಕಡಿದು ಹಾಕುವ ದುಃಸ್ಥಿತಿ ತಲೆದೋರುತ್ತದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
ತಕ್ಷಣವೇ ಡ್ಯಾಂನಿಂದ ಹೊರ ಬಿಡುತ್ತಿರುವ ನೀರನ್ನು ಸ್ಥಗಿತಗೊಳಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಂದು ಬೃಹತ್ ಪ್ರಮಾಣದ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ಟಿ.ಎಂ ಚಂದ್ರಪ್ಪ, ಜಿಲ್ಲಾಧ್ಯಕ್ಷರಾದ ಎಸ್.ಶಿವಮೂರ್ತಿ, ಜಿಲ್ಲಾ ಕಾರ್ಯಾಧ್ಯಕ್ಷರಾದ ಕೆ.ರಾಘವೇಂದ್ರ, ಜಿಲ್ಲಾ ಕಾರ್ಯದರ್ಶಿ ಗುರುಶಾಂತ, ಭದ್ರಾವತಿ ತಾಲೂಕು ಘಟಕದ ಅಧ್ಯಕ್ಷರಾದ ಜಿ.ಎನ್ ಪಂಚಾಕ್ಷರಿ,
ಪ್ರಧಾನ ಕಾರ್ಯದರ್ಶಿ ಸಿ.ಬಿ ಹನುಮಂತಪ್ಪ, ಕೆ.ಎಚ್ ಪ್ರಕಾಶ್, ಎಂ.ಎಚ್ ಬಸವನಗೌಡ, ಕಾರ್ಯದರ್ಶಿ ಹೆಚ್.ಜೆ ಮಂಜುನಾಥ್, ಶಿವಮೊಗ್ಗ ತಾಲೂಕು ಘಟಕದ ಅಧ್ಯಕ್ಷರಾದ ಸಿ.ಚಂದ್ರಪ್ಪ ಸೇರಿದಂತೆ ಮೊದಲಾದವರಿದ್ದರು.