
ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಆದೇಶ : ಶಿವಮೊಗ್ಗದಲ್ಲಿ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ!
ಶಿವಮೊಗ್ಗ, ಸೆ. 22: ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವಂತೆ ಆದೇಶಿಸಿರುವ ಕಾವೇರಿ ನಿಯಂತ್ರಣ ಸಮಿತಿ ಹಾಗೂ ಕಾವೇರಿ ನದಿ ನಿರ್ವಹಣಾ ಪ್ರಾಧಿಕಾರಗಳ ಆದೇಶ ವಿರೋಧಿಸಿ, ಶುಕ್ರವಾರ ಶಿವಮೊಗ್ಗ ನಗರದ ಡಿಸಿ ಕಚೇರಿ ಎದುರು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ಕಪ್ಪು ಬಾವುಟ ಪ್ರದರ್ಶನ ಮಾಡಿ ಪ್ರತಿಭಟನೆ ನಡೆಸಿತು.
ಪ್ರಸ್ತುತ ಮುಂಗಾರು ಮುನಿಸಿನಿಂದ ಕಾವೇರಿ ಕಣಿವೆ ಭಾಗದಲ್ಲಿ ನಿರೀಕ್ಷಿತ ಮಳೆಯಾಗಿಲ್ಲ. ಬರ ಪರಿಸ್ಥಿತಿ ತಲೆದೋರಿದೆ. ಇಂತಹ ಸಂದರ್ಭದಲ್ಲಿ ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಪ್ರಾಧಿಕಾರಗಳು ಹೊರಡಿಸಿರುವ ಆದೇಶವು ಕರ್ನಾಟಕಕ್ಕೆ ಮಾರಕವಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
ಕಾವೇರಿ ವಿಚಾರದಲ್ಲಿ ರಾಜ್ಯದಲ್ಲಿ ಪ್ರತಿಭಟನೆ ನಡೆಯುತ್ತಿದೆ. ತಕ್ಷಣವೇ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಬೇಕು. ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳಿಗೆ ಸಂಬಂಧಪಡದ ತಜ್ಞರ ಸಮಿತಿ ರಚಿಸಿ, ಎರಡು ರಾಜ್ಯಗಳಿಗೆ ಕಳುಹಿಸಿ ವಾಸ್ತವ ಸ್ಥಿತಿಗತಿಯ ವರದಿ ಪಡೆದುಕೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಸಂಘಟನೆಯ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್, ಮುಖಂಡರಾದ ಹೆಚ್.ಎಂ.ಸಂಗಯ್ಯ, ಎನ್.ನಾಗೇಶ್ ರಾವ್, ಕೆ.ಆರ್.ಶಿವಣ್ಣ, ನರಸಿಂಹಮೂರ್ತಿ, ಸೋಮಶೇಖರಯ್ಯ, ಮಂಜುಳ, ಶಂಕ್ರಾನಾಯ್ಕ್, ಹೆಚ್.ಎಸ್.ಪ್ರಸನ್ನಕುಮಾರ್, ಶ್ರೀಧರ್, ಚಿಕ್ಕಮಟ್ಟಿ ಗೋವಿಂದ ಸ್ವಾಮಿ ಮೊದಲಾದವರಿದ್ದರು.