
ವಿದ್ಯುತ್ ಶಾಕ್ : ಲೈನ್ ಮ್ಯಾನ್ ಸಾವು – ಮತ್ತೋರ್ವರಿಗೆ ಗಂಭೀರ ಗಾಯ!
ಭದ್ರಾವತಿ, ಸೆ. 24: ವಿದ್ಯುತ್ ಕಂಬದಲ್ಲಿ ದುರಸ್ತಿ ಮಾಡುತ್ತಿದ್ದ ವೇಳೆಯೇ ವಿದ್ಯುತ್ ಪ್ರವಹಿಸಿದ ಪರಿಣಾಮ ಶಾಕ್ ನಿಂದ ಲೈನ್ ಮ್ಯಾನ್ ಓರ್ವರು ಮೃತಪಟ್ಟು, ಮತ್ತೋರ್ವರು ಗಂಭೀರವಾಗಿ ಗಾಯಗೊಂಡ ಘಟನೆ ಶಿವಮೊಗ್ಗ ನಗರದ ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ.
ಚೆನ್ನಗಿರಿ ತಾಲೂಕಿನ ಕಿರಣ್ (25) ಮೃತಪಟ್ಟ ಲೈನ್ ಮ್ಯಾನ್ ಎಂದು ಗುರುತಿಸಲಾಗಿದೆ. ರಾಣೆಬೆನ್ನೂರು ಮೂಲದ ಸುನೀಲ್ (26) ಎಂಬುವರಿಗೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಿಬ್ಬರು ಭದ್ರಾವತಿ ತಾಲೂಕು ಮಾಚೇನಹಳ್ಳಿ ಮೆಸ್ಕಾಂ ವಿಭಾಗ – 5 ರ ಲೈನ್ ಮ್ಯಾನ್ ಗಳಾಗಿದ್ದಾರೆ.
ಹೇಗಾಯ್ತು?: ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದ 1 ನೇ ಕ್ರಾಸ್ ಬಳಿ ಘಟನೆ ನಡೆದಿದೆ. ನಿರ್ವಹಣೆ ಕಾರಣದಿಂದ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿ, ದುರಸ್ತಿ ಕಾರ್ಯ ಕೈಗೊಳ್ಳಲಾಗಿತ್ತು. ಕಿರಣ್ ಹಾಗೂ ಸುನೀಲ್ ಅವರು ವಿದ್ಯುತ್ ಕಂಬವೇರಿ ಕೆಲಸ ಮಾಡುತ್ತಿದ್ದರು.
ಈ ವೇಳೆ ಏಕಾಏಕಿ ಕಂಬದಲ್ಲಿ ವಿದ್ಯುತ್ ಪ್ರವಹಿಸಿದೆ. ಇದರಿಂದ ಇಬ್ಬರು ಶಾಕ್ ಗೆ ತುತ್ತಾಗಿದ್ದಾರೆ. ಕಿರಣ್ ಕಂಬದಲ್ಲಿಯೇ ಸಿಲುಕಿದ್ದು, ಸುನೀಲ್ ಕೆಳಕ್ಕೆ ಬಿದ್ದಿದ್ದಾರೆ. ತಕ್ಷಣವೇ ಇತರೆ ಮೆಸ್ಕಾಂ ಸಿಬ್ಬಂದಿಗಳು ನಾಗರೀಕರ ಸಹಕಾರದೊಂದಿಗೆ ಚಿಂತಾಜನಕ ಸ್ಥಿತಿಯಲ್ಲಿದ್ದ ಕಿರಣ್ ಅವರನ್ನು ಕಂಬದಿಂದ ಕೆಳಗಿಳಿಸಿದ್ದಾರೆ.
ಇಬ್ಬರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಿರಣ್ ಮೃತಪಟ್ಟಿರುವುದನ್ನು ವೈದ್ಯರು ಖಚಿತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಮೆಸ್ಕಾಂ ಎಇಇ ಬೀರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಕುರಿತಂತೆ ಹೆಚ್ಚಿನ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ.