
ಜೋಗ ಸಮೀಪದ ವಡನ್ ಬೈಲ್ ದೇವಿ ಗುಂಡಿ ಬಳಿ ಈಜಲು ತೆರಳಿದ್ದ ಕೃಷಿ ಅಧಿಕಾರಿ, ಬ್ಯಾಂಕ್ ಸಿಬ್ಬಂದಿ ನೀರುಪಾಲು!
ಜೋಗಫಾಲ್ಸ್ (ಸಾಗರ), ಸೆ. 24: ಈಜಲು ತೆರಳಿದ್ದ ವೇಳೆ ನೀರಿನಲ್ಲಿ ಮುಳುಗಿ ಕೃಷಿ ಅಧಿಕಾರಿ ಹಾಗೂ ಬ್ಯಾಂಕ್ ಸಿಬ್ಬಂದಿ ಸಾವನ್ನಪ್ಪಿದ ಘಟನೆ, ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಕಾರ್ಗಲ್ ಪೊಲೀಸ್ ಠಾಣೆ ವ್ಯಾಪ್ತಿಯ ಜೋಗಫಾಲ್ಸ್ ಸಮೀಪದ ವಡನ್ ಬೈಲ್ ಅರಣ್ಯ ಪ್ರದೇಶದಲ್ಲಿರುವ ದೇವಿ ಗುಂಡಿಯಲ್ಲಿ ಭಾನುವಾರ ನಡೆದಿದೆ.
ಸಾಗರದ ಕೃಷಿ ಅಧಿಕಾರಿ ಕುಮಾರ್ ಕೆ ಟಿ (35) ಹಾಗೂ ಐಡಿಎಫ್’ಸಿ ಬ್ಯಾಂಕ್ ಕಲೆಕ್ಟರ್ ಅರುಣ್ (28) ಮೃತಪಟ್ಟವರೆಂದು ಗುರುತಿಸಲಾಗಿದೆ. ಕುಮಾರ್ ಕೆ ಟಿ ಅವರು ಕುಟುಂಬ ಸದಸ್ಯರೊಂದಿಗೆ ದೇವಿ ಬೈಲು ಗುಂಡಿಯ ಬಳಿ ಪ್ರವಾಸಕ್ಕೆಂದು ಆಗಮಿಸಿದ್ದರು. ಇವರ ಜೊತೆ ಅವರ ಸ್ನೇಹಿತರಾದ ಅರುಣ್ ಕೂಡ ತೆರಳಿದ್ದರು.
ಮಧ್ಯಾಹ್ನ ಊಟ ಮಾಡಿದ ನಂತರ, ಇಬ್ಬರು ದೇವಿ ಗುಂಡಿಯಲ್ಲಿ ಈಜಾಡಲು ಇಳಿದಿದ್ದರು. ಈ ವೇಳೆ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದಾರೆ. ತಕ್ಷಣವೇ ಕುಟುಂಬ ಸದಸ್ಯರು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಕಾರ್ಗಲ್ ಪೊಲೀಸ್ ಠಾಣೆ ಸಬ್ ಇನ್ಸ್’ಪೆಕ್ಟರ್ ಹೊಳೆ ಬಸಪ್ಪ ಮತ್ತವರ ಸಿಬ್ಬಂದಿಗಳು ದೌಡಾಯಿಸಿದ್ದಾರೆ.
ನುರಿತ ಈಜುಗಾರರ ಸಹಾಯದಿಂದ ನೀರಿನಲ್ಲಿ ಮುಳುಗಿದ್ದ ಇಬ್ಬರ ಶವಗಳನ್ನು ಹೊರತೆಗೆದಿದ್ದಾರೆ. ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸಾಗರ ಉಪ ವಿಭಾಗೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.