
ಭದ್ರಾ ಡ್ಯಾಂನಿಂದ ನೀರು ಬಿಡುಗಡೆಗೆ ಆಗ್ರಹಿಸಿ ದಾವಣಗೆರೆ ಬಂದ್!
ದಾವಣಗೆರೆ, ಸೆ. 25: ಭದ್ರಾ ಡ್ಯಾಂನಿಂದ ನೀರು ಹರಿಸುವಂತೆ ಆಗ್ರಹಿಸಿ, ಸೋಮವಾರ ಭಾರತೀಯ ರೈತ ಒಕ್ಕೂಟವು ದಾವಣಗೆರೆ ಬಂದ್ ಗೆ ಕರೆ ನೀಡಿತ್ತು.
ಭದ್ರಾ ಜಲಾಶಯದಿಂದ ಬಲದಂಡೆ ನಾಲೆಗೆ ಸತತ 100 ದಿನಗಳ ಕಾಲ ನೀರು ಹರಿಸುವುದಾಗಿ ಹೇಳಲಾಗಿತ್ತು. ಆದರೆ ಬೇಸಿಗೆ ನೆಪವೊಡ್ಡಿ ಭದ್ರಾ ಕಾಡಾ ಸಮಿತಿಯು, ದಿಢೀರ್ ಆಗಿ 40 ದಿನಕ್ಕೆ ಡ್ಯಾಂನಿಂದ ನೀರು ಬಂದ್ ಮಾಡಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಡ್ಯಾಂನಿಂದ ನೀರು ಸ್ಥಗಿತಗೊಳಿಸುವ ಮೂಲಕ, ದಾವಣಗೆರೆ ಜಿಲ್ಲೆಯ ಅಚ್ಚುಕಟ್ಟು ವ್ಯಾಪ್ತಿಯ ರೈತರ ಬದುಕಿನೊಂದಿಗೆ ಭದ್ರಾ ಕಾಡಾ ಸಮಿತಿ ಚೆಲ್ಲಾಟವಾಡುತ್ತಿದೆ. ಸರಿಸುಮಾರು 1.25 ಲಕ್ಷ ಎಕರೆಯಲ್ಲಿ ಬೆಳೆದ ಭತ್ತದ ಬೆಳೆ ಒಣಗಿ ರೈತರು ಸಂಕಷ್ಟ ಅನುಭವಿಸುವಂತಾಗಿದೆ. ತಕ್ಷಣವೇ ಡ್ಯಾಂನಿಂದ ನೀರು ಬಿಡಬೇಕು ಎಂದು ಆಗ್ರಹಿಸಿದೆ.
ಬೆಂಬಲ: ದಾವಣಗೆರೆ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಭಾಗಶಃ ಯಶಸ್ವಿಯಾಗಿದೆ. ಬಂದ್ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಪೊಲೀಸ್ ಪಹರೆ ಹಾಕಲಾಗಿತ್ತು. ವಿವಿಧ ಸಂಘಟನೆಗಳು ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ್ದವು. ಬಂದ್ ಹಿನ್ನೆಲೆಯಲ್ಲಿ ರೈತ ಒಕ್ಕೂಟವು ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ರ್ಯಾಲಿ ನಡೆಸಿತು.