
ಆಮ್ ಆದ್ಮಿ ಪಕ್ಷದಲ್ಲಿ ಭುಗಿಲೆದ್ದ ಭಿನ್ನಮತ : ಪಕ್ಷದ ಚಟುವಟಿಕೆಯಿಂದ ದೂರ ಉಳಿಯಲು ನಿರ್ಧರಿಸಿದ ಮುಖಂಡರು!
ಶಿವಮೊಗ್ಗ, ಸೆ. 25: ಆಮ್ ಆದ್ಮಿ ಪಕ್ಷ (ಎಎಪಿ) ದಲ್ಲಿ ಭಿನ್ನಮತ ಭುಗಿಲೆದಿದ್ದಿದೆ. ‘ನಾಯಕರ ವರ್ತನೆಯಿಂದ ಬೇಸತ್ತು, ಪಕ್ಷದ ಚಟುವಟಿಕೆಗಳಿಂದ ದೂರ ಉಳಿಯುತ್ತಿರುವುದಾಗಿ’ ಆ ಪಕ್ಷದ ಸ್ಥಳೀಯ ನಾಯಕರು ಸೋಮವಾರ ತಿಳಿಸಿದ್ದಾರೆ.
ಶಿವಮೊಗ್ಗ ನಗರದಲ್ಲಿ ಪಕ್ಷದ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಮಕ್ಬುಲ್ ಅಹಮದ್ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಎಎಪಿ ಪಕ್ಷದ ತತ್ವ-ಸಿದ್ಧಾಂತ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ನಾಯಕತ್ವ ಮೆಚ್ಚಿ ಎಎಪಿ ಪಕ್ಷ ಸೇರ್ಪಡೆಯಾಗಿದ್ದೆವು. ಪಕ್ಷದ ಸಂಘಟನೆಗಾಗಿ ಹಗಲಿರುಳು ಪ್ರಾಮಾಣಿಕವಾಗಿ ಶ್ರಮಿಸಿದ್ದೆವೆ. ಜನಪರ ಹೋರಾಟಗಳನ್ನು ಮಾಡಿದ್ದೆವೆ.
ಆದರೆ ವಿಧಾನಸಭೆ ಚುನಾವಣೆಯ ನಂತರ ಪಕ್ಷದ ಕೆಲ ನಾಯಕರು, ಪಕ್ಷದ ಸಂಘಟನೆಯಿಂದ ದೂರ ಉಳಿದಿದ್ದಾರೆ. ಪಕ್ಷಕ್ಕೆ ದುಡಿದವರಿಗೆ ಯಾವುದೇ ಸ್ಥಾನಮಾನ ನೀಡದೆ ನಿರ್ಲಕ್ಷ್ಯವಹಿಸಲಾಗಿದೆ. ಈ ಕುರಿತಂತೆ ಪಕ್ಷದ ರಾಜ್ಯ ಮುಖಂಡರ ಗಮನಕ್ಕೆ ತರಲಾಗಿತ್ತು. ಆದರೆ ಅವರು ಈ ನಿಟ್ಟಿನಲ್ಲಿ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಕ್ಷದ ನಾಯಕರ ವರ್ತನೆಯಿಂದ ಬೇಸತ್ತು, ಪಕ್ಷದ ಚಟುವಟಿಕೆಗಳಿಂದ ದೂರ ಉಳಿಯುವ ನಿರ್ಧಾರ ಕೈಗೊಂಡಿದ್ದೆವೆ. ಸದ್ಯಕ್ಕೆ ಯಾವುದೇ ಪಕ್ಷಕ್ಕೆ ಸೇರ್ಪಡೆಯಾಗುವುದಿಲ್ಲ. ಮುಂದಿನ ದಿನಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಕ್ಬುಲ್ ಅಹಮದ್ ಅವರು ತಿಳಿಸಿದ್ದಾರೆ.
ಗೋಷ್ಠಿಯಲ್ಲಿ ಮುಖಂಡರಾದ ದಾದಾ ಖಲಂದರ್, ಸಯ್ಯದ್ ಜಬೀರ್, ಮಹಮ್ಮದ್ ಅಲಿ, ಫಕ್ರುದ್ದಿನ್, ಸೈಪುಲ್ಲಾ, ಸಮೀನಾ, ಹಸೀನಾ, ಅಬ್ದುಲ್ ಮಜೀದ್, ಫಜಲು, ರಫೀಕ್, ಮಾಲೀಕ್ ಸೇರಿದಂತೆ ಮೊದಲಾದವರಿದ್ದರು.