
ಶಿವಮೊಗ್ಗ : ಬಿಗಿ ಪೊಲೀಸ್ ಪಹರೆಯಲ್ಲಿ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಆರಂಭ!
ಶಿವಮೊಗ್ಗ, ಸೆ. 28: ಶಿವಮೊಗ್ಗದ ಕೋಟೆ ಭೀಮೇಶ್ವರ ಸ್ವಾಮಿ ದೇವಾಲಯ ಆವರಣದಲ್ಲಿ, ಹಿಂದೂ ಮಹಾಮಂಡಲದವತಿಯಿಂದ ಪ್ರತಿಷ್ಠಾಪಿಸಲಾಗಿರುವ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನಾ ಪೂರ್ವ ಮೆರವಣಿಗೆಗೆ ಗುರುವಾರ ವಿಧ್ಯುಕ್ತ ಚಾಲನೆ ದೊರಕಿದೆ.

ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮೆರವಣಿಗೆಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದಾರೆ. ವಿವಿಧ ರಾಜಕೀಯ ಪಕ್ಷ, ಸಂಘಸಂಸ್ಥೆಗಳ ಮುಖಂಡರು ಪಾಲ್ಗೊಂಡಿದ್ದಾರೆ.
ಹಾಗೆಯೇ ಡೊಳ್ಳು, ತಮಟೆ ಸೇರಿದಂತೆ ವಿವಿಧ ಕಲಾ ತಂಡಗಳು ಮೆರವಣಿಗೆಯ ಮೆರಗು ಹೆಚ್ಚಿಸಿವೆ. ದೇಶಭಕ್ತಿಯ ಘೋಷಣೆಗಳು ಮುಗಿಲುಮುಟ್ಟಿವೆ.

ಬಿಗಿ ಪಹರೆ: ಮುನ್ನೆಚ್ಚರಿಕೆ ಕ್ರಮವಾಗಿ ಮೆರವಣಿಗೆಗೆ ಬಿಗಿ ಪೊಲೀಸ್ ಪಹರೆ ಹಾಕಲಾಗಿದೆ. 5 ಹೆಚ್ಚುವರಿ ಪೊಲೀಸ್ ಅಧೀಕ್ಷಕರು, 14 ಪೊಲೀಸ್ ಉಪಾಧೀಕ್ಷಕರು, 40 ಪೋಲಿಸ್ ನಿರೀಕ್ಷಕರು, 75 ಪೊಲೀಸ್ ಉಪ ನಿರೀಕ್ಷಕರು, 2,500 ಎಎಸ್ಐ, ಹೆಚ್.ಸಿ, ಪಿಸಿ ಮತ್ತು ಹೋಂ ಗಾರ್ಡ್ ಸಿಬ್ಬಂದಿಗಳು,
10 ಡಿಎಆರ್ ತುಕಡಿ, 15 ಕೆಎಸ್ಆರ್.ಪಿ ತುಕಡಿ, 02 ಆರ್.ಎ.ಎಫ್ ಪಡೆ, 100 ವಿಡಿಯೋ ಕ್ಯಾಮರಾಗಳು ಮತ್ತು 8 ಡ್ರೋಣ್ ಕ್ಯಾಮರಾಗಳನ್ನು ಬಳಕೆ ಮಾಡಲಾಗಿದೆ.
ಮೆರವಣಿಗೆ ಮಾರ್ಗ : ಮೆರವಣಿಗೆಯು ಭೀಮೇಶ್ವರ ದೇವಸ್ಥಾನದಿಂದ ಪ್ರಾರಂಭವಾಗಲಿದೆ. ಎಸ್.ಪಿ.ಎಂ ಮುಖ್ಯ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧೀ ಬಜಾರ್ ಮುಖ್ಯ ರಸ್ತೆ, ಎಸ್.ಎನ್. ಸರ್ಕಲ್, ಬಿ.ಹೆಚ್ ರಸ್ತೆ ಮುಖಾಂತರ ಎ.ಎ ಸರ್ಕಲ್, ನೆಹರು ರಸ್ತೆ ಮುಖಾಂತರವಾಗಿ ಗೋಪಿ ಸರ್ಕಲ್,
ದುರ್ಗಿಗುಡಿ ಮುಖ್ಯ ರಸ್ತೆಯಿಂದ ಜೈಲ್ ಸರ್ಕಲ್, ಕುವೆಂಪು ರಸ್ತೆ ಮಾರ್ಗವಾಗಿ ಶಿವಮೂರ್ತಿ ಸರ್ಕಲ್, ಸವಳಂಗ ಮುಖ್ಯ ರಸ್ತೆ ಮಾರ್ಗವಾಗಿ ಮಹಾವೀರ್ ಸರ್ಕಲ್, ಡಿ.ವಿ.ಎಸ್ ಸರ್ಕಲ್, ಕಾನ್ವೆಂಟ್ ರಸ್ತೆ, ಬಿ.ಹೆಚ್ ರಸ್ತೆ, ಪೊಲೀಸ್ ಕಾರ್ನರ್, ಕೋಟೆ ಪೊಲೀಸ್ ಠಾಣೆ ರಸ್ತೆ ಮಾರ್ಗವಾಗಿ ಭೀಮೇಶ್ವರ ದೇವಸ್ಥಾನದ ಬಳಿಯ ತುಂಗಾ ನದಿಯಲ್ಲಿ ವಿಸರ್ಜನೆ ಮಾಡಲಾಗತ್ತದೆ.