
ಮುಂಜಾನೆ ತುಂಗಾ ನದಿಯಲ್ಲಿ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ : ಶಾಂತಿಯುತವಾಗಿ ನಡೆದ ಮೆರವಣಿಗೆ
ಶಿವಮೊಗ್ಗ, ಸೆ. 29: ಹಿಂದೂ ಮಹಾ ಮಂಡಲದಿಂದ ಭೀಮೇಶ್ವರ ದೇವಾಲಯದಲ್ಲಿ ಪ್ರತಿಷ್ಠಾಪಿಸಿದ್ದ, ಹಿಂದೂ ಮಹಾಸಭಾ ಗಣಪತಿಯ ವಿಸರ್ಜನಾ ಪೂರ್ವ ಮೆರವಣಿಗೆಯು, ಯಾವುದೇ ಗೊಂದಲ-ಗಡಿಬಿಡಿಗೆ ಆಸ್ಪದವಾಗದಂತೆ ಅತ್ಯಂತ ಶಾಂತಿಯುತವಾಗಿ ಪೂರ್ಣಗೊಂಡಿದೆ. ಇದು ಪೊಲೀಸ್ ಇಲಾಖೆಯನ್ನು ನಿಟ್ಟುಸಿರುವ ಬಿಡುವಂತೆ ಮಾಡಿದೆ.
ಗುರುವಾರ ಬೆಳಿಗ್ಗೆ ಸರಿಸುಮಾರು 11. 10 ನಿಮಿಷಕ್ಕೆ ಮೆರವಣಿಗೆ ಆರಂಭಗೊಂಡಿತ್ತು. ಶುಕ್ರವಾರ ಬೆಳಿಗ್ಗೆ 4 ಗಂಟೆ ಸುಮಾರಿಗೆ ಭೀಮೇಶ್ವರ ದೇವಾಲಯ ಸಮೀಪದ ತುಂಗಾ ನದಿಯಲ್ಲಿ ಗಣಪತಿ ಮೂರ್ತಿಯ ವಿಸರ್ಜನಾ ಕಾರ್ಯ ನಡೆದಿದೆ. ಈ ವೇಳೆ ನೂರಾರು ಜನರು ಸ್ಥಳದಲ್ಲಿದ್ದರು.
ಪ್ರಸ್ತುತ ವರ್ಷದ ಮೆರವಣಿಗೆಯಲ್ಲಿ ಭಾರೀ ಜನಸ್ತೋಮ ಕಂಡುಬಂದಿತು. ಅತ್ಯಂತ ಅದ್ದೂರಿಯಾಗಿ ನಡೆಯಿತು. ಶಿವಮೊಗ್ಗ ಮಾತ್ರವಲ್ಲದೆ ಜಿಲ್ಲೆಯ ವಿವಿಧೆಡೆಯಿಂದಲೂ ಜನರು ಆಗಮಿಸಿದ್ದು ಕಂಡುಬಂದಿತು.
ಸುಗಮ – ಶಾಂತಿಯುತವಾಗಿ ಮೆರವಣಿಗೆ ನಡೆಸಲು ಜಿಲ್ಲಾ ಪೊಲೀಸ್ ಇಲಾಖೆ ವ್ಯಾಪಕ ಮುನ್ನೆಚ್ಚರಿಕೆ ಕ್ರಮಕೈಗೊಂಡಿತ್ತು. ಕಳೆದ ಹಲವು ದಿನಗಳಿಂದ ಪೂರ್ವಭಾವಿ ಸಿದ್ದತೆ ಮಾಡಿಕೊಂಡಿತ್ತು. ಆರ್.ಎ.ಎಫ್. ತುಕುಡಿ ಸೇರಿದಂತೆ ಹೊರ ಜಿಲ್ಲೆಗಳಿಂದಳು ಹೆಚ್ಚುವರಿ ಪೊಲೀಸ್ ಪಡೆಯನ್ನು ಕರೆಯಿಸಿಕೊಂಡಿತ್ತು.
ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದವಾಗದಂತೆ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಶಾಂತಿಯುತವಾಗಿ ಪೂರ್ಣಗೊಂಡಿರುವುದು ಪೊಲೀಸ್ ಇಲಾಖೆ ನಿಟ್ಟುಸಿರು ಬಿಡುವಂತೆ ಮಾಡಿದೆ.