
ಕರ್ನಾಟಕ ಬಂದ್ : ಶಿವಮೊಗ್ಗದಲ್ಲಿ ನೀರಸ ಪ್ರತಿಕ್ರಿಯೆ!
ಶಿವಮೊಗ್ಗ, ಸೆ. 29: ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ವಿರೋಧಿಸಿ, ಶುಕ್ರವಾರ ವಿವಿಧ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ ಗೆ ಶಿವಮೊಗ್ಗ ನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಾಗರೀಕರ ದೈನಂದಿನ ಜನಜೀವನದ ಮೇಲೆ ಯಾವುದೇ ಪರಿಣಾಮ ಬೀರಿಲ್ಲವಾಗಿದೆ.
ಸರ್ಕಾರಿ, ಖಾಸಗಿ ಬಸ್ ಗಳು, ಆಟೋ, ಟ್ಯಾಕ್ಸಿಗಳು ಸೇರಿದಂತೆ ಬಹುತೇಕ ಪ್ರಯಾಣಿಕ ವಾಹನಗಳ ಸಂಚಾರ ಎಂದಿನಂತಿತ್ತು. ಶಾಲಾ, ಕಾಲೇಜು, ಸರ್ಕಾರಿ, ಖಾಸಗಿ ಕಚೇರಿಗಳು ಕಾರ್ಯನಿರ್ವಹಿಸಿದವು. ವ್ಯಾಪಾರ, ವಹಿವಾಟಿಗೆ ಯಾವುದೇ ಅಡ್ಡಿಯಾಗಲಿಲ್ಲ. ಅಂಗಡಿ-ಮುಂಗಟ್ಟುಗಳು ತೆರೆದಿದ್ದವು. ಜನಜೀವನ ಎಂದಿನಂತಿತ್ತು.
ಎಲ್ಲದಕ್ಕಿಂತ ಮುಖ್ಯವಾಗಿ, ನಗರದಲ್ಲಿ ಯಾವುದೇ ಸಂಘಟನೆಗಳು ಬಂದ್ ನಡೆಸುವ ಕುರಿತಂತೆ ನಾಗರೀಕರಿಗೆ ಮನವಿ ಮಾಡಿರಲಿಲ್ಲ. ಉಳಿದಂತೆ ಬಂದ್ ಬೆಂಬಲಿಸಿ ಕೆಲ ಸಂಘಟನೆಗಳು ಪ್ರತಿಭಟನೆ ನಡೆಸಿದವು.+
ಬಸ್ ನಿಲ್ದಾಣದ ಎದುರು ಕನ್ನಡ ಕಾರ್ಮಿಕರ ರಕ್ಷಣಾ ವೇದಿಕೆ ಹಾಗೂ ಕರವೇ ಜಂಟಿಯಾಗಿ ಪ್ರತಿಭಟಿಸಿದರೆ, ಗೋಪಿ ವೃತ್ತದಲ್ಲಿ ಕರವೇಯ ಮತ್ತೊಂದು ಬಣ ಪ್ರತಿಭಟಿಸಿತು. ಜಿಲ್ಲಾಧಿಕಾರಿಗಳ ಕಚೇರಿ ಎದುರು ರೈತ ಸಂಘ ಧರಣಿ ನಡೆಸಿತು.
ಉಳಿದಂತೆ ಜಿಲ್ಲೆಯ ಇತರೆ ನಗರ – ಪಟ್ಟಣಗಳಲ್ಲಿಯೂ ಕರ್ನಾಟಕ ಬಂದ್ ನೀರಸವಾಗಿದ್ದ ವರದಿಗಳು ಬಂದಿವೆ. ಕನ್ನಡ ಪರ ಸಂಘಟನೆಗಳು ಬಂದ್ ಬೆಂಬಲಿಸಿ ಪ್ರತಿಭಟನೆ ನಡೆಸಿವೆ.
ಅಂಗಡಿಗಳ ಬಾಗಿಲು ಮುಚ್ಚುವಂತೆ ಮನವಿ!
*** ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಶಿವಮೊಗ್ಗದ ನೆಹರು ರಸ್ತೆಯಲ್ಲಿ ಅಂಗಡಿ-ಮುಂಗಟ್ಟು ಬಂದ್ ಮಾಡುವಂತೆ ವರ್ತಕರಿಗೆ ಮನವಿ ಮಾಡಿಕೊಂಡ ಘಟನೆ ನಡೆಯಿತು. ಈ ವೇಳೆ ಕೆಲ ವರ್ತಕರು ಸ್ವಲ್ಪ ಸಮಯದವರೆಗೆ ಅಂಗಡಿ ಬಾಗಿಲು ಮುಚ್ಚಿದರು. ಮತ್ತೆ ಕೆಲ ವರ್ತಕರು ಕಾರ್ಯಕರ್ತರ ಜೊತೆ ವಾಗ್ದಾದ ನಡೆಸಿದ ಘಟನೆಯೂ ನಡೆದಿದೆ.