
ವದಂತಿ ಹರಡದಂತೆ ಶಿವಮೊಗ್ಗ ಎಸ್ಪಿ ಮನವಿ
ಶಿವಮೊಗ್ಗ, ಅ. 1: ಶಿವಮೊಗ್ಗ ನಗರದ ರಾಗಿಗುಡ್ಡ ಬಡಾವಣೆಯಲ್ಲಿ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರು ಸ್ಪಷ್ಟಪಡಿಸಿದ್ದಾರೆ.
ಭಾನುವಾರ ಸಂಜೆ ಈ ಕುರಿತಂತೆ ಅವರು ಮಾಹಿತಿ ನೀಡಿದ್ದಾರೆ. ರಾಗಿಗುಡ್ಡ ಬಡಾವಣೆಯಲ್ಲಿ ಕಲ್ಲು ತೂರಾಟದ ಘಟನೆ ನಡೆದಿದೆ. ಈ ವೇಳೆ ನಾಲ್ಕೈದು ಜನರಿಗೆ ಗಾಯವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಸ್ತುತ ರಾಗಿಗುಡ್ಡ ಬಡಾವಣೆಯಲ್ಲಿ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ. ಸಿ.ಆರ್.ಪಿ.ಸಿ. ಕಲಂ 144 ರ ಅನ್ವಯ ಬಡಾವಣೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಘಟನೆಯ ಕುರಿತಂತೆ ಯಾವುದೇ ವದಂತಿಗಳಿಗೆ, ಗಾಳಿಸುದ್ದಿಗಳಿಗೆ ನಾಗರೀಕರು ಕಿವಿಗೊಡಬಾರದು. ವದಂತಿ ಹರಡುವವರ ವಿರುದ್ದ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಸ್ಪಿ ಅವರು ಎಚ್ಚರಿಕೆ ನೀಡಿದ್ದಾರೆ.