
ಹವಾಮಾನ ವೈಪರೀತ್ಯ : ಶಿವಮೊಗ್ಗದಲ್ಲಿ ಲ್ಯಾಂಡಿಂಗ್ ಆಗದೆ ಬೆಂಗಳೂರಿಗೆ ಹಿಂದಿರುಗಿದ ವಿಮಾನ!
ಶಿವಮೊಗ್ಗ, ಅ. 2: ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಆಗಮಿಸಿದ ಇಂಡಿಗೋ ಸಂಸ್ಥೆಯ ಪ್ರಯಾಣಿಕ ವಿಮಾನವು, ಹವಾಮಾನ ವೈಪರೀತ್ಯ ಕಾರಣದಿಂದ ಲ್ಯಾಂಡಿಂಗ್ ಆಗದೆ, ಮತ್ತೇ ಬೆಂಗಳೂರಿಗೆ ಹಿಂದಿರುಗಿದ ಘಟನೆ ಅ. 1 ರಂದು ನಡೆದಿದೆ.
ಎಂದಿನಂತೆ ಅ. 1 ರಂದು ಬೆಳಿಗ್ಗೆ ಬೆಂಗಳೂರಿನಿಂದ ಹೊರಟ ವಿಮಾನವು, ನಿಗದಿತ ಅವಧಿಗೆ ಶಿವಮೊಗ್ಗಕ್ಕೆ ಆಗಮಿಸಿದೆ. ರನ್ ವೇಯಲ್ಲಿ ಗಾಳಿಯ ವೇಗ ಹೆಚ್ಚಿದ್ದ ಕಾರಣದಿಂದ, ವಿಮಾನಕ್ಕೆ ಲ್ಯಾಂಡಿಂಗ್ ಆಗಲು ಎಟಿಸಿ ಕೇಂದ್ರದಿಂದ ಗ್ರೀನ್ ಸಿಗ್ನಲ್ ದೊರಕಿಲ್ಲ.
ಹಲವು ನಿಮಿಷಗಳ ಕಾಲ ವಿಮಾನವು ಆಕಾಶದಲ್ಲಿಯೇ ಸುತ್ತು ಹಾಕಿದೆ. ಲ್ಯಾಂಡಿಂಗ್ ಗೆ ಗ್ರೀನ್ ಸಿಗ್ನಲ್ ದೊರಕಿಲ್ಲ. ಹಾಗೆಯೇ ವಿಮಾನದಲ್ಲಿನ ಇಂಧನ ಪ್ರಮಾಣವೂ ಕೂಡ ಕಡಿಮೆಯಾಗುತ್ತಿದ್ದ ಕಾರಣದಿಂದ, ಮತ್ತೇ ಬೆಂಗಳೂರಿಗೆ ಹಿಂದಿರುಗಿದೆ ಎಂದು ತಿಳಿದುಬಂದಿದೆ.
ನಂತರ ಅದೇ ವಿಮಾನವು ಮಧ್ಯಾಹ್ನ ಸುಮಾರಿಗೆ 1.30 ಕ್ಕೆಶಿವಮೊಗ್ಗಕ್ಕೆ ಆಗಮಿಸಿದೆ. ಈ ವೇಳೆಗಾಗಲೇ ಗಾಳಿಯ ವೇಗ ಕಡಿಮೆಯಾಗಿದ್ದ ಕಾರಣದಿಂದ, ವಿಮಾನ ಲ್ಯಾಂಡಿಂಗ್ ಆಗಲು ಗ್ರೀನ್ ಸಿಗ್ನಲ್ ದೊರಕಿದೆ ಎಂದು ಹೇಳಲಾಗಿದೆ.