
‘ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ದ ಕಠಿಣ ಕ್ರಮ’ : ಶಿವಮೊಗ್ಗ ಎಸ್ಪಿ ಎಚ್ಚರಿಕೆ
ಶಿವಮೊಗ್ಗ, ಅ. 3: ‘ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರು ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ಈ ಕುರಿತಂತೆ ಅವರು ಮಾಹಿತಿ ನೀಡಿದ್ದಾರೆ. ಕಳೆದ ಭಾನುವಾರ ರಾಗಿಗುಡ್ಡ (ಶಾಂತಿನಗರ) ಬಡಾವಣೆಯಲ್ಲಿ ನಡೆದ ಅಹಿತಕರ ಘಟನೆಗಳಿಗೆ ಸಂಬಂಧಿಸಿದಂತೆ ಕೆಲವರು ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಈ ಕುರಿತಂತೆ ಎಸ್ಪಿ ಅವರು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಪರಾಮರ್ಶಿಸಿ ವರದಿ ಮಾಡಿ: ರಾಗಿಗುಡ್ಡ ಬಡಾವಣೆಯಲ್ಲಿ ಘಟನೆ ನಡೆದ ವೇಳೆ, ಪರ ಊರಿನ ಎರಡು ಓಮ್ನಿ ಕಾರುಗಳಿದ್ದ ಬಗ್ಗೆ ಮಾಧ್ಯಮಗಳ ವರದಿ ಕುರಿತಂತೆ ಎಸ್ಪಿ ಅವರು ಸ್ಪಷ್ಟನೆ ನೀಡಿದ್ದಾರೆ.
‘ಸದರಿ ಕಾರುಗಳು ನ್ಯಾಮತಿ ಕಡೆಯದ್ದಾಗಿದೆ. ಕಾರುಗಳಲ್ಲಿ ಎರಡು ಕೋಮಿನ ಕಡೆಯವರು ಇದ್ದರು. ಮೆರವಣಿಗೆ ನೋಡುವ ಉದ್ದೇಶದಿಂದ ಅವರೆಲ್ಲ ಶಿವಮೊಗ್ಗಕ್ಕೆ ಆಗಮಿಸಿದ್ದರು. ಶಿವಮೊಗ್ಗ ನಗರ ವೀಕ್ಷಿಸಿ ರಾಗಿಗುಡ್ಡಕ್ಕೆ ಬಂದಿದ್ದರು.
ಈ ವೇಳೆ ರಾಗಿಗುಡ್ಡದಲ್ಲಿ ಅಹಿತಕರ ಘಟನೆಗಳು ನಡೆದ ನಂತರ, ಅವರು ತಮ್ಮ ಊರುಗಳಿಗೆ ಹಿಂದಿರುಗಿದ್ದರು. ಘಟನೆಗಳ ಸತ್ಯಾಸತ್ಯತೆ ಪರಾಮರ್ಶಿಸಿ ವರದಿ ಮಾಡುವಂತೆ ಮಾಧ್ಯಮದವರಿಗೆ ಸೂಚಿಸಿರುವ ಎಸ್ಪಿ ಅವರು, ರಾಗಿಗುಡ್ಡ ಘಟನೆಯ ಕುರಿತಂತೆ ಸಮಗ್ರ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಚಿಕಿತ್ಸೆ: ಘಟನೆಯಲ್ಲಿ ಎರಡು ಕೋಮಿನ ಕಡೆಯವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಾಗೆಯೇ ಎರಡು ಕೋಮಿನ ಕಡೆಯ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಇದೇ ವೇಳೆ ಎಸ್ಪಿ ಮಾಹಿತಿ ನೀಡಿದ್ದಾರೆ.