
ಮುಂಗಾರು ಮಳೆ ಅವಧಿ ಅಂತ್ಯ : ಶಿವಮೊಗ್ಗ ಜಿಲ್ಲೆಯಲ್ಲಿ ವರ್ಷಧಾರೆಯ ತೀವ್ರ ಕೊರತೆ – ಬೇಸಿಗೆಯಲ್ಲಿ ಎದುರಾಗಲಿದೆಯೇ ಭಾರೀ ಸಂಕಷ್ಟ..?!
ವರದಿ : ಬಿ. ರೇಣುಕೇಶ್
ಶಿವಮೊಗ್ಗ, ಅ. 4: ಮುಂಗಾರು ಮಳೆಯ ನಾಲ್ಕು ತಿಂಗಳ (ಜೂನ್ – ಸೆಪ್ಟೆಂಬರ್) ಅವಧಿ ಅಂತ್ಯಗೊಂಡಿದೆ. ಆದರೆ ಮಲೆನಾಡಿನಲ್ಲಿ, ಪ್ರಸಕ್ತ ಸಾಲಿನಲ್ಲಿ ವರ್ಷಧಾರೆಯ ತೀವ್ರ ಕೊರತೆ ಎದುರಾಗಿದೆ. ಬರಗಾಲ ಆವರಿಸಿದೆ. ಕೃಷಿ ಚಟುವಟಿಕೆ ಅಸ್ತವ್ಯಸ್ತವಾಗುವಂತಾಗಿದೆ.
ಮುಂಗಾರು ಆರಂಭದ ಜೂನ್ ತಿಂಗಳ ವೇಳೆಯೇ, ಶಿವಮೊಗ್ಗ ಜಿಲ್ಲೆಯಲ್ಲಿ ಮಳೆಯ ತೀವ್ರ ಕೊರತೆ ಕಂಡುಬಂದಿತ್ತು. ಆದರೆ ಜುಲೈ ತಿಂಗಳಲ್ಲಿ ಉತ್ತಮ ಮಳೆಯಾಗಿತ್ತು. ಇದರಿಂದ ಜಿಲ್ಲೆಯಾದ್ಯಂತ ಜಲಾಶಯ, ನದಿ, ಕೆರೆಕಟ್ಟೆಗಳಲ್ಲಿ ನೀರಿನ ಸಂಗ್ರಹ ಪ್ರಮಾಣದಲ್ಲಿ ಏರಿಕೆ ಕಂಡುಬಂದಿತ್ತು. ಬರಗಾಲದ ಕರಿಛಾಯೆ ಮರೆಯಾಗುವಂತಾಗಿತ್ತು.
ಆದರೆ ಆಗಸ್ಟ್ ತಿಂಗಳಲ್ಲಿ ಮತ್ತೆ ಮಳೆ ಕೈಕೊಟ್ಟಿತ್ತು. ಸೆಪ್ಟೆಂಬರ್ ಮಾಹೆಯಲ್ಲಿಯೂ ಇದೇ ಸ್ಥಿತಿ ಮುಂದುರಿದಿದೆ. ಜುಲೈ ಹೊರತುಪಡಿಸಿದರೆ ಜೂನ್, ಆಗಸ್ಟ್, ಸೆಪ್ಟೆಂಬರ್ ತಿಂಗಳುಗಳಲ್ಲಿ ಜಿಲ್ಲೆಯ ಯಾವುದೇ ತಾಲೂಕುಗಳಲ್ಲಿಯೂ ವಾಡಿಕೆ ಮಳೆಯಾಗಿಲ್ಲ.
ಹವಾಮಾನ ಇಲಾಖೆ ಮೂಲಗಳು ನೀಡುವ ಮಾಹಿತಿ ಅನುಸಾರ, ಪ್ರಸ್ತುತ ಮುಂಗಾರು ಮಳೆ ಅವಧಿಯಲ್ಲಿ ಜಿಲ್ಲೆಯಲ್ಲಿ ಶೇ. 38 ರಷ್ಟು ಮಳೆ ಕೊರತೆಯಾಗಿದೆ. ಇದು ಇತ್ತೀಚಿನ ವರ್ಷಗಳಲ್ಲಿ ಅತ್ಯಧಿಕ ಮಳೆ ಕೊರತೆಯಾಗಿದೆ! ಮಳೆ ಕೊರತೆಯಿಂದ ಕೃಷಿ ಚಟುವಟಿಕೆ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮೆಕ್ಕೆಜೋಳ ಬೆಳೆಗೆ ಸಾಕಷ್ಟು ಧಕ್ಕೆಯಾಗಿದೆ. ಮತ್ತೊಂದೆಡೆ, ಭತ್ತದ ಬೆಳೆಗೂ ನೀರಿನ ಕೊರತೆ ಎದುರಾಗಿದೆ.
ವರ್ಷಧಾರೆಯ ಕಣ್ಣಾಮುಚ್ಚಾಲೆಯಾಟದಿಂದ ರೈತರು ಸಾಕಷ್ಟು ಸಂಕಷ್ಟ ಎದುರಿಸುವಂತಾಗಿದೆ. ಮಳೆ ಕೊರತೆ ಕಾರಣದಿಂದ ಈಗಾಗಲೇ ರಾಜ್ಯ ಸರ್ಕಾರ ಶಿವಮೊಗ್ಗ ಜಿಲ್ಲೆಯ ಎಲ್ಲ 7 ತಾಲೂಕುಗಳನ್ನು ಬರ ಪೀಡಿತವೆಂದು ಘೋಷಣೆ ಮಾಡಿದೆ.
ಭರ್ತಿಯಾಗದ ಡ್ಯಾಂಗಳು: ರಾಜ್ಯದ ಪ್ರಮುಖ ಜಲ ವಿದ್ಯುತ್ ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿ ಹಾಗೂ ಮಧ್ಯ ಕರ್ನಾಟಕದ ಮುಖ್ಯ ಡ್ಯಾಂಗಳಲ್ಲೊಂದಾದ ಭದ್ರಾ ಡ್ಯಾಂಗಳ ನೀರಿನ ಸಂಗ್ರಹದಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಕಳೆದ ವರ್ಷ ಎರಡೂ ಡ್ಯಾಂಗಳು ಈ ವೇಳೆಗಾಗಲೇ ಗರಿಷ್ಠ ಮಟ್ಟ ತಲುಪಿದ್ದವು.
ಆದರೆ ಪ್ರಸ್ತುತ ವರ್ಷ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಮಳೆ ಕೊರತೆಯಿಂದ, ನೀರಿನ ಸಂಗ್ರಹದಲ್ಲಿ ಭಾರೀ ಕುಸಿತವಾಗಿದೆ. ಪ್ರಸ್ತುತ ಲಿಂಗನಮಕ್ಕಿ ಡ್ಯಾಂನಲ್ಲಿ 1787 (ಗರಿಷ್ಠ ಮಟ್ಟ : 1819) ಅಡಿ ಹಾಗೂ ಉಳಿದಂತೆ ಭದ್ರಾ ಡ್ಯಾಂನಲ್ಲಿ 160 (ಗರಿಷ್ಠ ಮಟ್ಟ : 186) ಅಡಿ ನೀರಿದೆ.
ಬೇಸಿಗೆ ಸಂಕಷ್ಟ: ಮುಂಬರುವ ಬೇಸಿಗೆ ವೇಳೆ ನೀರಿನ ಅಭಾವ ತೀವ್ರ ಸ್ವರೂಪದಲ್ಲಿ ಎದುರಾಗುವ ಆತಂಕ ಎದುರಾಗಿದೆ. ಧಾರಾಕಾರ ಮಳೆಯಾಗುವ ಲಕ್ಷಣಗಳು ದೂರವಾಗಿದೆ. ಒಟ್ಟಾರೆ ಬೇಸಿಗೆ ವೇಳೆ ಜೀವ ಜಲಕ್ಕೆ ತತ್ವಾರ ಎದುರಾಗುವ ಸಾಧ್ಯತೆಗಳು ಗೋಚರವಾಗುತ್ತಿವೆ.