ಗಾಂಜಾ ಮಾರಾಟ ಪ್ರಕರಣ : ಇಬ್ಬರಿಗೆ 2 ವರ್ಷ ಕಠಿಣ ಜೈಲು ಶಿಕ್ಷೆ – 10 ಸಾವಿರ ರೂ. ದಂಡ!

ಗಾಂಜಾ ಮಾರಾಟ ಪ್ರಕರಣ : ಇಬ್ಬರಿಗೆ 2 ವರ್ಷ ಕಠಿಣ ಜೈಲು ಶಿಕ್ಷೆ – 10 ಸಾವಿರ ರೂ. ದಂಡ!

ಶಿವಮೊಗ್ಗ, ಅ. 7: ಗಾಂಜಾ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಬ್ಬರು ಯುವಕರಿಗೆ 2 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ, ಶಿವಮೊಗ್ಗದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ಶಿವಮೊಗ್ಗದ ಬಾಪೂಜಿ ನಗರದ ನಿವಾಸಿ ರಾಹಿಲ್ ಖಾನ್ (22) ಹಾಗೂ ವಿನೋಬನಗರದ ನಿವಾಸಿ ರೋಹನ್ (19) ಶಿಕ್ಷೆಗೊಳಗಾದ ಯುವಕರೆಂದು ಗುರುತಿಸಲಾಗಿದೆ. ಅ. 6 ರಂದು ನ್ಯಾಯಾಧೀಶರಾದ ಮಂಜುನಾಥ್ ನಾಯಕ್ ಅವರು ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಸುರೇಶ್ ಅವರು ವಾದ ಮಂಡಿಸಿದ್ದರು.

ಘಟನೆ ಹಿನ್ನಲೆ : 05-09-2020 ರಂದು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಗುರುಪುರ ಗ್ರಾಮದಲ್ಲಿ ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ವರ್ತಮಾನ ಲಭಿಸಿತ್ತು.

ಅಂದಿನ ಡಿವೈಎಸ್ಪಿ ಉಮೇಶ್ ಈಶ್ವರ್ ನಾಯಕ್ ನೇತೃತ್ವದ ತಂಡವು ದಾಳಿ ನಡೆಸಿ, ರಾಹಿಲ್ ಮತ್ತು ರೋಹನ್ ಅವರನ್ನು ಬಂಧಿಸಿತ್ತು. ಇವರಿಂದ 10,150 ರೂ. ಮೌಲ್ಯದ 1,150 ಗ್ರಾಂ ತೂಕದ ಒಣ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿ ಚಕ್ರ ವಾಹನ ವಶಕ್ಕೆ ಪಡೆದುಕೊಂಡಿತ್ತು. ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ನಂತರ ನ್ಯಾಯಾಲಯಕ್ಕೆ ಆರೋಪಪಟ್ಟಿ ದಾಖಲಿಸಲಾಗಿತ್ತು.

Previous post ಅ. 7 – 8 ರಂದು ಶಿವಮೊಗ್ಗ ನಗರದ ವಿವಿಧೆಡೆ ಕುಡಿಯುವ ನೀರು ಪೂರೈಕೆ ವ್ಯತ್ಯಯ : ಸಹಕರಿಸಲು ಮನವಿ
Next post ಶಿವಮೊಗ್ಗ : ತಮಿಳು ಭಾಷೆ ಚಿತ್ರದ ಪೋಸ್ಟರ್ ಹರಿದು ಸಿನಿಮಾ ಥಿಯೇಟರ್ ಮುಂಭಾಗ ಪ್ರತಿಭಟನೆ!