ಶಿವಮೊಗ್ಗ : ತಮಿಳು ಭಾಷೆ ಚಿತ್ರದ ಪೋಸ್ಟರ್ ಹರಿದು ಸಿನಿಮಾ ಥಿಯೇಟರ್ ಮುಂಭಾಗ ಪ್ರತಿಭಟನೆ!
ಶಿವಮೊಗ್ಗ, ಅ. 7: ತಮಿಳು ಭಾಷೆಯ ಚಲನಚಿತ್ರ ಪ್ರದರ್ಶನ ಮಾಡುತ್ತಿರುವುದನ್ನು ವಿರೋಧಿಸಿ, ಕನ್ನಡ ಕಾರ್ಮಿಕರ ರಕ್ಷಣಾ ವೇದಿಕೆ ಕಾರ್ಯಕರ್ತರು ಶನಿವಾರ ಶಿವಮೊಗ್ಗ ನಗರದ ವೀರಭದ್ರೇಶ್ವರ ಚಿತ್ರಮಂದಿರದ ಎದುರು ಪ್ರತಿಭಟನೆ ನಡೆಸಿದರು.
ಕೆಲ ದಿನಗಳಿಂದ ವೀರಭದ್ರೇಶ್ವರ ಥಿಯೇಟರ್ ನಲ್ಲಿ ನಟ ವಿಜಯ್ ಆಂಟೋನಿ ಅಭಿನಯದ ರತ್ತಂ ತಮಿಳು ಭಾಷೆಯ ಸಿನಿಮಾ ಪ್ರದರ್ಶನ ಮಾಡಲಾಗುತ್ತಿತ್ತು. ಈ ವಿಷಯ ತಿಳಿದು ಕಾರ್ಯಕರ್ತರು ಥಿಯೇಟರ್ ಎದುರು ದಿಢೀರ್ ಪ್ರತಿಭಟನೆ ನಡೆಸಿದರು. ಈ ವೇಳೆ ಧಿಯೇಟರ್ ಹೊರಭಾಗದಲ್ಲಿ ಹಾಕಿದ್ದ ಪೋಸ್ಟರ್ ಗಳನ್ನು ಹರಿದು ಹಾಕಿದರು.
ಸಂಘಟನೆಯ ಜಿಲ್ಲಾಧ್ಯಕ್ಷ ವಾಟಾಳ್ ಮಂಜುನಾಥ್ ಅವರು ಮಾತನಾಡಿ, ಕಾವೇರಿ ವಿವಾದ ಪರಿಹಾರವಾಗುವವರೆಗೂ ತಮಿಳು ಭಾಷೆಯ ಸಿನಿಮಾಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಬಾರದು. ಪ್ರಸ್ತುತ ಥಿಯೇಟರ್ ನಲ್ಲಿ ಪ್ರದರ್ಶಿಸುತ್ತಿರುವ ಸಿನಿಮಾ ಪ್ರದರ್ಶನ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.