ತೀರ್ಥಹಳ್ಳಿ – ಮನೆಯೊಂದರಲ್ಲಿ ಬೆಂಕಿ ಅವಘಡ : ಮೂವರು ಸಜೀವ ದಹನ!
ತೀರ್ಥಹಳ್ಳಿ, ಅ. 8: ತೀರ್ಥಹಳ್ಳಿ ತಾಲೂಕಿನ ಅರಳಸುರಳಿ ಸಮೀಪದ ಕೆಕೋಡ್ ಎಂಬ ಗ್ರಾಮದ ಮನೆಯೊಂದರಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಮೂವರು ಕುಟುಂಬ ಸದಸ್ಯರು ಸಜೀವ ದಹನಗೊಂಡು, ಓರ್ವರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದ್ದು, ಭಾನುವಾರ ಮುಂಜಾನೆ ಬೆಳಕಿಗೆ ಬಂದಿದೆ.
ಅರ್ಚಕ ವೃತ್ತಿ ನಿರ್ವಹಿಸುತ್ತಿದ್ದ ರಾಘವೇಂದ್ರ ಕೆಕೋಡ್ (65), ಅವರ ಪತ್ನಿ ನಾಗರತ್ನ (55) ಹಾಗೂ ಪುತ್ರ ಶ್ರೀರಾಮ್ (30) ಎಂಬುವರೇ ಸಜೀವ ದಹನಗೊಂಡವರೆಂದು ಗುರುತಿಸಲಾಗಿದೆ. ಪುತ್ರ ಭರತ್ (28) ಎಂಬುವರಿಗೆ ಗಂಭೀರ ಸ್ವರೂಪದ ಸುಟ್ಟು ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೆಕೋಡ್ ಗ್ರಾಮವು ಹೊಸನಗರ ರಸ್ತೆ ಮಾರ್ಗ ಮಧ್ಯೆಯಲ್ಲಿ ಬರುವ ಗ್ರಾಮವಾಗಿದೆ. ಮನೆಯಲ್ಲಿ ಹೊಗೆ ಬರುತ್ತಿರುವುದನ್ನು ಗಮನಿಸಿದ ಸುತ್ತಮುತ್ತಲಿನ ನಿವಾಸಿಗಳು ಸ್ಥಳಕ್ಕಾಗಮಿಸಿದ ವೇಳೆ ದುರಂತ ಬೆಳಕಿಗೆ ಬಂದಿದೆ.
ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಪೊಲೀಸರು ದೌಡಾಯಿಸಿದ್ದಾರೆ. ಸದರಿ ಘಟನೆಯು ಇಡೀ ಗ್ರಾಮವನ್ನೇ ಬೆಚ್ಚಿ ಬೀಳಿಸುವಂತೆ ಮಾಡಿದೆ. ಅಗ್ನಿ ಅವಘಡಕ್ಕೆ ಕಾರಣವೆನೆಂಬುವುದು ಇನ್ನಷ್ಟೆ ಸ್ಪಷ್ಟವಾಗಬೇಕಾಗಿದೆ.