ತೀವ್ರ ಬರಗಾಲ – ನೀರಿಲ್ಲದೆ ಒಣಗುತ್ತಿರುವ ಬೆಳೆಗಳು : ಮಳೆಗಾಗಿ ದೇವರ ಮೊರೆ ಹೋದ ಗ್ರಾಮಸ್ಥರು!
ಶಿವಮೊಗ್ಗ, ಅ. 9: ಪ್ರಸ್ತುತ ವರ್ಷ ಮುಂಗಾರು ಮಳೆ ಕೈಕೊಟ್ಟಿರುವ ಪರಿಣಾಮ, ಶಿವಮೊಗ್ಗ ಜಿಲ್ಲೆಯ ಹಲವೆಡೆ ತೀವ್ರ ಸ್ವರೂಪದ ಬರಗಾಲ ಸ್ಥಿತಿ ತಲೆದೋರಿದೆ. ಕೆಲ ಗ್ರಾಮಗಳಲ್ಲಿ ಕೆರೆಕಟ್ಟೆಗಳಲ್ಲಿ ನೀರಿಲ್ಲದೆ ಬರಿದಾಗಿವೆ. ಕೃಷಿ ಬೆಳೆಗಳು ಒಣಗುತ್ತಿವೆ. ಇದು ಗ್ರಾಮಸ್ಥರನ್ನು ಕಂಗೆಡುವಂತೆ ಮಾಡಿದೆ.
ಈ ನಡುವೆ ಶಿವಮೊಗ್ಗ ತಾಲೂಕು ಬಸವನಗಂಗೂರು ಗ್ರಾಮಸ್ಥರು, ಮಳೆಗಾಗಿ ಪ್ರಾರ್ಥಿಸಿ ದೇವರ ಮೊರೆ ಹೋಗಿದ್ದಾರೆ. ತಾಲೂಕಿನ ಕೋಟೆಗಂಗೂರು ಗ್ರಾಮದಲ್ಲಿರುವ ಪುರಾತನ ಉದ್ಭವ ಈಶ್ವರ ಲಿಂಗಕ್ಕೆ ಸೋಮವಾರ ವಿಶೇಷ ಪೂಜೆ ಸಲ್ಲಿಸಿದ್ದಾರೆ.
‘ಇತ್ತೀಚಿಗೀನ ವರ್ಷಗಳಿಗೆ ಹೋಲಿಸಿದರೆ ಪ್ರಸ್ತುತ ವರ್ಷ ತೀವ್ರ ಸ್ವರೂಪದ ಮಳೆ ಕೊರತೆ ಎದುರಾಗಿದೆ. ಇದರಿಂದ ಗ್ರಾಮದ ಕೆರೆಕಟ್ಟೆಗಳಲ್ಲಿ ನೀರಿನ ಸಂಗ್ರಹದಲ್ಲಿ ತೀವ್ರ ಕೊರತೆಯಾಗಿದೆ. ತೋಟ, ಗದ್ದೆಗಳಲ್ಲಿ ಬೆಳೆದ ಬೆಳೆಗಳಿಗೆ ನೀರು ಹಾಯಿಸಲು ಸಾಧ್ಯವಾಗದಂತಾಗಿದೆ.
ಈಗಲೇ ಈ ಪರಿಸ್ಥಿತಿಯಾದರೆ ಬೇಸಿಗೆಯಲ್ಲಿ ಮತ್ತಷ್ಟು ಸಮಸ್ಯೆ ಉಲ್ಬಣವಾಗುತ್ತದೆ. ಈ ಕಾರಣದಿಂದ ಮಳೆಗಾಗಿ ಪ್ರಾರ್ಥಿಸಿ ಕೋಟೆಗಂಗೂರಿನ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿಕೊಂಡಿದ್ದೆವೆ. ಭಗವಂತನ ಕೃಪೆಯಿಂದ ಉತ್ತಮ ಮಳೆಯಾದರೆ ಸರ್ವರಿಗೂ ಅನುಕೂಲವಾಗುತ್ತದೆ’ ಎಂದು ಬಸವನಗಂಗೂರು ಗ್ರಾಮದ ಮುಖಂಡ ಕುಮಾರ್ ಅವರು ತಿಳಿಸಿದ್ದಾರೆ.
‘ಉದ್ಭವ ಈಶ್ವರ ಲಿಂಗಕ್ಕೆ ಸುತ್ತಮುತ್ತಲಿನ ಗ್ರಾಮಸ್ಥರು ನಿಯಮಿತವಾಗಿ ಆಗಮಿಸಿ ಪೂಜೆ ಸಲ್ಲಿಸುತ್ತಾರೆ. ದೇವಾಲಯವು ಅತ್ಯಂತ ಪುರಾತನ ಕಾಲದ್ದಾಗಿದೆ. ಪ್ರತಿ ವರ್ಷ ಬಸವನಗಂಗೂರು ಗ್ರಾಮಸ್ಥರು ದೇವಾಲಯಕ್ಕೆ ಆಗಮಿಸುತ್ತಾರೆ. ಪ್ರಸ್ತುತ ಊರಿನ ಜನರೆಲ್ಲ ಆಗಮಿಸಿ ಮಳೆಗಾಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ’ ಎಂದು ಕೋಟೆಗಂಗೂರು ಗ್ರಾಮದ ಮುಖಂಡರೂ ಆದ ದೇವಾಲಯದ ಅರ್ಚಕ ಬಸವರಾಜಪ್ಪ ಅವರು ತಿಳಿಸಿದ್ದಾರೆ.