ಭದ್ರಾವತಿ ನಗರದಲ್ಲಿ ಹೊರ ವರ್ತುಲ ರಸ್ತೆ ನಿರ್ಮಾಣ : ಶಾಸಕ ಬಿ.ಕೆ.ಸಂಗಮೇಶ್ವರ್ ಗೆ ಸಿಎಂ ನೀಡಿದ ಭರವಸೆಯೇನು?

ಬೆಂಗಳೂರು / ಭದ್ರಾವತಿ, ಅ. 11: ಭದ್ರಾವತಿ ಪಟ್ಟಣದ ಹೊರವಲಯದ ಪ್ರದೇಶಗಳಲ್ಲಿ ಹೊರ ವರ್ತುಲ ರಸ್ತೆ ನಿರ್ಮಾಣಕ್ಕೆ ಅನುಮತಿ ನೀಡುವಂತೆ ಕೋರಿ, ಶಾಸಕ ಬಿ.ಕೆ.ಸಂಗಮೇಶ್ವರ್ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.

ಈ ಸಂಬಂಧ ಅವರು ಬೆಂಗಳೂರಿನಲ್ಲಿ ಸಿಎಂ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಬಿ.ಕೆ.ಸಂಗಮೇಶ್ವರ್ ಅವರ ಬೇಡಿಕೆಗೆ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಮುಖ್ಯಮಂತ್ರಿಗಳು, ಮುಂಬರುವ ಬಜೆಟ್ ನಲ್ಲಿ ಸೂಕ್ತ ಅನುದಾನ ಮೀಸಲಿಡುವ ಭರವಸೆ ನೀಡಿದ್ದಾರೆ.

ಈ ಸಂಬಂಧ ಶಾಸಕ ಬಿ.ಕೆ.ಸಂಗಮೇಶ್ವರ್ ಅವರು ಮಾತನಾಡಿ, ಭದ್ರಾವತಿ ನಗರದಲ್ಲಿ ಸುಗಮ ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸುವ ಕೊಡುವ ಉದ್ದೇಶ ಹಾಗೂ ಭವಿಷ್ಯದ ನಗರದ ಬೆಳವಣಿಗೆ ಗಮನದಲ್ಲಿಟ್ಟುಕೊಂಡು ನೂತನ ಹೊರ ವರ್ತುತಲ ರಸ್ತೆ ನಿರ್ಮಾಣ ಯೋಜನೆ ಸಿದ್ದಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಸುಮಾರು 20 ಕಿ.ಮೀ. ಉದ್ದದ ರಸ್ತೆ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದೆ. ಇದಕ್ಕೆ ಸರಿಸುಮಾರು 300 ಕೋಟಿ ರೂ.ಗಳಷ್ಟು ಅನುದಾನದ ಅವಶ್ಯಕತೆಯಿದೆ. ಈ ಸಂಬಂಧ ಸಿಎಂ ಅವರನ್ನು ಭೇಟಿಯಾಗಿ ಮನವಿ ಮಾಡಲಾಗಿದ್ದು, ಸಿಎಂ ಅವರು ಯೋಜನೆ ಅನುಷ್ಠಾನಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಬಜೆಟ್ ನಲ್ಲಿ ಅನುದಾನ ಮೀಸಲಿಡುವ ಭರವಸೆ ನೀಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಶಿವನಿ ಕ್ರಾಸ್,  ದೇವರನರಸೀಪುರ, ಕಬಳಿಕಟ್ಟೆ, ಕಣಕಟ್ಟೆ, ಸೀಗೆಬಾಗಿ, ಅಮೀರ್ ಜಾನ್ ಕಾಲೋನಿ, ಹೆಬ್ಬಂಡೆ, ಬಿಳಕಿ ಕ್ರಾಸ್ ಮತ್ತೀತರ ಪ್ರದೇಶಗಳ ಮೂಲಕ ಹೊರವರ್ತುಲ ರಸ್ತೆ ಹಾದು ಹೋಗುವ ಯೋಜನೆಯಿದೆ. ನಗರಾಭಿವೃದ್ದಿ ಇಲಾಖೆ ಮೂಲಕ ಕಾಮಗಾರಿ ಅನುಷ್ಠಾನಗೊಳಿಸುವ ಚರ್ಚೆ ನಡೆದಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ರಸ್ತೆ ನಿರ್ಮಾಣದ ಕುರಿತಂತೆ ವಿಸ್ತೃತ ಯೋಜನಾ ವರದಿ ಸಿದ್ದಪಡಿಸಲಾಗುವುದು. ತದನಂತರವಷ್ಟೆ ಹೆಚ್ಚಿನ ವಿವರಗಳು ಲಭ್ಯವಾಗಬೇಕಾಗಿದೆ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಅಗತ್ಯವಿರುವ ಎಲ್ಲ ಕ್ರಮಕೈಗೊಳ್ಳಲಾಗುವುದು ಎಂದು ಶಾಸಕ ಬಿ.ಕೆ.ಸಂಗಮೇಶ್ವರ್ ಅವರು ತಿಳಿಸಿದ್ದಾರೆ.

Previous post ಅತ್ತಿಬೆಲೆ ಪಟಾಕಿ ದುರಂತ : ತಹಶೀಲ್ದಾರ್, ಇನ್ಸ್ ಪೆಕ್ಟರ್, ಅಗ್ನಿಶಾಮಕ ದಳದ ಅಧಿಕಾರಿ ಸಸ್ಪೆಂಡ್ ಗೆ ಮುಖ್ಯಮಂತ್ರಿ ಸೂಚನೆ!
Next post ಶಿವಮೊಗ್ಗ ಜಿಲ್ಲೆಯ ಪಟಾಕಿ ಅಂಗಡಿ – ಗೋಡೌನ್ ಗಳ ಮೇಲೆ ದಿಢೀರ್ ದಾಳಿ : 2000 ಕೆ.ಜಿ. ತೂಕದ ಪಟಾಕಿ ವಶ!