ಶಿವಮೊಗ್ಗ ಜಿಲ್ಲೆಯ ಪಟಾಕಿ ಅಂಗಡಿ – ಗೋಡೌನ್ ಗಳ ಮೇಲೆ ದಿಢೀರ್ ದಾಳಿ : 2000 ಕೆ.ಜಿ. ತೂಕದ ಪಟಾಕಿ ವಶ!
ಶಿವಮೊಗ್ಗ, ಅ. 12: ಅತ್ತಿಬೆಲೆ ಪಟಾಕಿ ದುರಂತ ಪ್ರಕರಣದ ನಂತರ, ಪಟಾಕಿ ಅಂಗಡಿ – ಗೋದಾಮುಗಳಲ್ಲಿ ಸುರಕ್ಷತಾ ನಿಯಮ ಪಾಲನೆಯಾಗದಿದ್ದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ದ ಕಠಿಣ ಕ್ರಮ ಜರುಗಿಸುವುದಾಗಿ ಮುಖ್ಯಮಂತ್ರಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇದರ ಬೆನ್ನಲ್ಲೇ, ಶಿವಮೊಗ್ಗ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯು ಜಿಲ್ಲೆಯ ಪಟಾಕಿ ಮಾರಾಟ ಮಳಿಗೆ ಹಾಗೂ ಗೋದಾಮುಗಳ ಮೇಲೆ ದಿಢೀರ್ ದಾಳಿ ಮಾಡಿ ತಪಾಸಣೆ ನಡೆಸಿದ ಘಟನೆ ಅ.11 ರಂದು ನಡೆದಿದೆ. ಈ ವೇಳೆ ನಿಯಮ ಉಲ್ಲಂಘಿಸಿ ಪಟಾಕಿ ಮಾರಾಟ ಮಾಡುತ್ತಿದ್ದ ಹಾಗೂ ದಾಸ್ತಾನು ಮಾಡುತ್ತಿದ್ದವರ ಮೇಲೆ ಪ್ರಕರಣ ದಾಖಲಿಸಿದ ಘಟನೆ ನಡೆದಿದೆ.
ಪೊಲೀಸ್, ಕಂದಾಯ, ಲೋಕೋಪಯೋಗಿ, ಅಗ್ನಿಶಾಮಕ, ಮೆಸ್ಕಾಂ, ಮಹಾನಗರ ಪಾಲಿಕೆ, ನಗರಸಭೆ, ತಾಲೂಕು ಪಂಚಾಯ್ತಿಗಳ ಅಧಿಕಾರಿಗಳನ್ನೊಳಗೊಂಡ ಪ್ರತ್ಯೇಕ ತಂಡಗಳು ಈ ದಾಳಿ ನಡೆಸಿವೆ.
ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಹಾಗೂ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಸೂಚನೆ ಮೇರೆಗೆ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿನ ಪಟಾಕಿ ಮಾರಾಟ ಮಳಿಗೆ – ಗೋದಾಮುಗಳಲ್ಲಿ ತಪಾಸಣೆ ನಡೆಸಲಾಗಿದೆ.
ಶಿವಮೊಗ್ಗ ಉಪ ವಿಭಾಗದಲ್ಲಿ 6, ಭದ್ರಾವತಿ 21, ಸಾಗರದಲ್ಲಿ 9, ಶಿಕಾರಿಪುರದಲ್ಲಿ 20, ತೀರ್ಥಹಳ್ಳಿ ಉಪ ವಿಭಾಗದಲ್ಲಿ 7 ಸೇರಿದಂತೆ ಒಟ್ಟು 63 ಕಡೆಗಳಲ್ಲಿ ದಿಢೀರ್ ದಾಳಿ ನಡೆಸಿ ತಪಾಸಣೆ ನಡೆಸಲಾಗಿದೆ.
ಈ ವೇಳೆ ಮಳಿಗೆ ಹಾಗೂ ಗೋದಾಮುಗಳಲ್ಲಿ ಸುರಕ್ಷತಾ ನಿಯಮಗಳ ಪಾಲನೆ ಮಾಡಲಾಗುತ್ತಿದೆಯೇ? ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯಲಾಗಿದೆಯೇ? ಎಂಬುವುದನ್ನು ಪರಿಶೀಲನೆ ನಡೆಸಲಾಗಿದೆ.
ನಿಯಮ ಉಲ್ಲಂಘಿಸಿ ಪಟಾಕಿಗಳನ್ನು ಸಂಗ್ರಹಿಸಿಟ್ಟಿದ್ದ ಮತ್ತು ಮಾರಾಟ ಮಾಡುತ್ತಿದ್ದ ಮಳಿಗೆ / ಗೋದಾಮಿನ ಮಾಲೀಕರ ವಿರುದ್ದ ಭದ್ರಾವತಿ ಹೊಸಮನೆ ಪೊಲೀಸ್ ಠಾಣೆಯಲ್ಲಿ 1, ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ 1, ವಿನೋಬನಗರ ಪೊಲೀಸ್ ಠಾಣೆಯಲ್ಲಿ 1 ಮತ್ತು ಕೋಟೆ ಪೊಲೀಸ್ ಠಾಣೆಯಲ್ಲಿ 1 ಸೇರಿದಂತೆ ಒಟ್ಟು 4 ಪ್ರಕರಣಗಳನ್ನು ದಾಖಲಿಸಲಾಗಿದೆ. ಅಂದಾಜು 2,000 ಕೆ.ಜಿ ತೂಕದ ಪಟಾಕಿಗಳನ್ನು ವಶಕ್ಕೆ ಪಡೆದಿದೆ.