ಶಿವಮೊಗ್ಗ : ಪಾಳು ಬೀಳುತ್ತಿರುವ ಗಾಂಧಿ ಪಾರ್ಕ್ : ವ್ಯರ್ಥವಾದ ಕೋಟಿ ಕೋಟಿ ರೂ…!

ವರದಿ : ಬಿ. ರೇಣುಕೇಶ್

ಶಿವಮೊಗ್ಗ, ಅ. 13: ಶಿವಮೊಗ್ಗ ನಗರದ ಹೃದಯ ಭಾಗದಲ್ಲಿರುವ ವಿಶಾಲವಾದ ಮಹಾತ್ಮ ಗಾಂಧೀಜಿ ಉದ್ಯಾನವನವು ಅಸಮರ್ಪಕ ನಿರ್ವಹಣೆ, ಆಡಳಿತದ ದಿವ್ಯ ನಿರ್ಲಕ್ಷ್ಯದಿಂದ ಪಾಳು ಬೀಳಲಾರಂಭಿಸಿದೆ. ಹಲವು ಸೌಲಭ್ಯಗಳು ಧೂಳು ಹಿಡಿಯಲಾರಂಭಿಸಿವೆ!

ಪಾರ್ಕ್ ನಲ್ಲಿ ಕೋಟಿ ರೂ. ವೆಚ್ಚದಲ್ಲಿ ಅಳವಡಿಸಲಾಗಿದ್ದ ಮಕ್ಕಳ ಆಟಿಕೆ ಸಾಮಗ್ರಿಗಳು ಸಂಪೂರ್ಣ ಹಾಳಾಗಿ ಮುರಿದು ಬಿದ್ದಿವೆ. ದುರಸ್ತಿ ಮಾಡಲಾಗದ ಸ್ಥಿತಿಯಲ್ಲಿವೆ. ಇದರಿಂದ ಆಟೋಟದ ಉದ್ದೇಶಕ್ಕೆ ಪಾರ್ಕ್ ಗೆ ಆಗಮಿಸುವ ಮಕ್ಕಳು ನಿರಾಸೆಯಿಂದ ಹಿಂದಿರುಗುವಂತಾಗಿದೆ.

ಪಾರ್ಕ್ ನ ಪ್ರಮುಖ ಆಕರ್ಷಣೆಯಾಗಿದ್ದ ಮಕ್ಕಳು ರೈಲು ಸ್ಥಗಿತಗೊಂಡು ತಿಂಗಳುಗಳೇ ಉರುಳಿವೆ. ರೈಲಿನಲ್ಲಿ ಕಂಡುಬಂದಿರುವ ತಾಂತ್ರಿಕ ಸಮಸ್ಯೆ ಹಾಗೂ ಹಲವೆಡೆ ಹಳಿಗಳ ದುರಸ್ತಿ ಕಾರಣದಿಂದ ರೈಲು ಸಂಚರಿಸುತ್ತಿಲ್ಲ.

ನಗರದ ಸಾವಿರಾರು ಮಕ್ಕಳು ಈಜು ಕಲಿತ್ತಿದ್ದ ಈಜುಕೊಳ ಕೂಡ ಅವ್ಯವಸ್ಥೆಯ ಆಗರವಾಗಿ ಪರಿಣಮಿಸಿದೆ. ಕೊಳದಲ್ಲಿನ ನೀರು ಪಾಚಿ ಕಟ್ಟಿದ್ದು, ಅಸ್ವಚ್ಛತೆಯಿಂದ ಕೂಡಿದೆ.ಉಳಿದಂತೆ ಕಾರಂಜಿಗಳಿಂದ ನೀರು ಚಿಮ್ಮುತ್ತಿಲ್ಲ. ಕಸಕಡ್ಡಿ ತುಂಬಿಕೊಂಡಿದೆ. ಹಲವೆಡೆ ಗ್ರಾನೈಟ್, ಟೈಲ್ಸ್ ಗಳು ಕಿತ್ತು ಹೋಗಿವೆ.

ಕೋಟ್ಯಾಂತರ ರೂ.: ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದ ವೇಳೆ, ಪಾರ್ಕ್ ಅಭಿವೃದ್ದಿಗೆ ಸರಿಸುಮಾರು10 ಕೋಟಿ ರೂ. ಅನುದಾನವನ್ನು ಸರ್ಕಾರದಿಂದ ಬಿಡುಗಡೆಗೊಳಿಸಿದ್ದರು. ಈ ಹಣದಲ್ಲಿ ಮಕ್ಕಳ ಆಟಿಕೆ ಸಾಮಗ್ರಿಗಳ ಅಳವಡಿಕೆ, ಫೌಂಟೇನ್ ಗಳ ನಿರ್ಮಾಣ, ವಿದ್ಯುದ್ದೀಕರಣ, ವಾಕಿಂಗ್ ಪಾಥ್ ಗಳು, ವಿಶ್ರಾಂತಿ ಕುಟೀರಗಳು ಸೇರಿದಂತೆ ಹತ್ತು ಹಲವು ಅಭಿವೃದ್ದಿ ಕಾಮಗಾರಿ ನಡೆಸಲಾಗಿತ್ತು.

ನವೀಕರಣ ಕಾರ್ಯದ ನಂತರ ಪಾರ್ಕ್ ನಾಗರೀಕರ ಆಕರ್ಷಣೆಯ ಕೇಂದ್ರಬಿಂಧುವಾಗಿ ಪರಿಣಮಿಸಿತ್ತು. ನಳನಳಿಸುತ್ತಿತ್ತು. ಶಾಲಾ ಮಕ್ಕಳ ಪಿಕ್ ನಿಕ್ ಕೇಂದ್ರವಾಗಿತ್ತು. ಸದಾ ನಾಗರೀಕರಿಂದ ತುಂಬಿ ತುಳುಕುತ್ತಿತ್ತು. ಸಂಜೆಯ ವೇಳೆ ವಿದ್ಯುತ್ ದೀಪಾಲಂಕರಾದಿಂದ ಝಗಮಗಿಸುತ್ತಿತ್ತು.

ಆದರೆ ಸದ್ಯ ಪಾರ್ಕ್  ನಿಸ್ತೇಜವಾಗಿದೆ. ಕೋಟಿ ಕೋಟಿ ರೂ. ವೆಚ್ಚದಲ್ಲಿ ಕಲ್ಪಿಸಿದ್ದ ಸೌಲಭ್ಯಗಳು ಮೂಲೆಗುಂಪಾಗಿವೆ. ಇನ್ನಾದರೂ ಆಡಳಿತ ಪಾರ್ಕ್ ನ ಸೂಕ್ತ ನಿರ್ವಹಣೆಯತ್ತ ಆದ್ಯ ಗಮನಹರಿಸಬೇಕಾಗಿದೆ ಎಂದು ಪ್ರಜ್ಞಾವಂತ ನಾಗರೀಕರು ಆಗ್ರಹಿಸುತ್ತಾರೆ.

ಹೊಸದಾಗಿ ಮಕ್ಕಳ ಆಟಿಕೆ ಸಾಮಗ್ರಿ ಅಳವಡಿಕೆಗೆ ಮುಂದಾದ ಪಾಲಿಕೆ ಆಡಳಿತ

*** ಗಾಂಧಿ ಪಾರ್ಕ್ ನಲ್ಲಿ ಪ್ರಸ್ತುತವಿರುವ ಆಟಿಕೆ ಸಾಮಗ್ರಿಗಳು ಸಂಪೂರ್ಣ ಹಾಳಾಗಿರುವ ಹಿನ್ನೆಲೆಯಲ್ಲಿ, ಇವುಗಳನ್ನು ತೆರವುಗೊಳಿಸಿ ಹೊಸ ಆಟಿಕೆ ಸಾಮಗ್ರಿ ಅಳವಡಿಕೆಗೆ ಮಹಾನಗರ ಪಾಲಿಕೆ ಆಡಳಿತ ಕ್ರಮಕೈಗೊಂಡಿದೆ. ಹಾಗೆಯೇ ವಾಕಿಂಗ್ ಪಾಥ್, ಪೌಂಟೇನ್ ದುರಸ್ತಿ, ವಾಯು ವಿಹಾರ ನಡೆಸುವವರಿಗೆ ಅನುಕೂಲವಾಗಲು ಜಿಮ್ ಉಪಕರಣಗಳ ಅಳವಡಿಕೆ ಸೇರಿದಂತೆ ಸರಿಸುಮಾರು 2 ಕೋಟಿ ರೂ. ವೆಚ್ಚದಲ್ಲಿ ದುರಸ್ತಿ ಕಾರ್ಯಗಳನ್ನು ಕೈಗೆತ್ತಿಕೊಂಡಿದೆ ಎಂದು ಪಾಲಿಕೆ ಆಡಳಿತ ಮೂಲಗಳು ಮಾಹಿತಿ ನೀಡುತ್ತವೆ.

Previous post ಶಿವಮೊಗ್ಗ ನಗರದ ವಿವಿಧೆಡೆ ಅ. 12, 13 ರಂದು ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ
Next post ಸ್ಮಶಾನದ ಬಳಿ ಗುತ್ತಿಗೆದಾರನಿಂದ ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ!